ಅಲೆಮಾರಿ ಬದುಕು

ಕನಸುಗಳ ಮರಳದಂಡೆಯಲಿ
ನೋವ ಹೊತ್ತು ನಡೆವೆವು
ಬೆನ್ನಿಗಂಟಿದ ಹೊಟ್ಟೆ, ಅಳುವ ಕೂಸು
ಹೊತ್ತು, ಇನ್ನೊಂದು ಮೂಟೆ ರಟ್ಟೆಯಲಿ
ವೇದನೆಯ ಗಂಟು ಅಲ್ಲ ಇದು, ಜೀವನದ ಕುಂಟುಗಳಿವು
ಪ್ರಕ್ಷುಬ್ಧ ಬದುಕಿನ ಭಗ್ನ ಕನವರಿಕೆ

ಅಲೆಮಾರಿಗಳು ನಾವು,
ಬದುಕ ಅಲೆ ಸುಳಿಗೆ ಸಿಕ್ಕಿದರೂ
ತುಂಡು ರೊಟ್ಟಿ, ಹೊತ್ತು ಕೂಳಿಗಾಗಿ
ಸಾಗುವೆವು ಇನ್ನೂ ಮುಂದೆ ಮುಂದೆ

ಬರಿಗಾಲ ಪಾದ ಒಡೆದು ರಕ್ತ ಚಿಮ್ಮುತಿರೆ
ಬೆವರ ಹನಿ ಮಾಲೆಗಳು ಎದೆ ನಡುವೆ ಹರಿದು
ಹೊಕ್ಕಳ ಬಳ್ಳಿಯಲ್ಲಿ ತಂಗಿ ಮತ್ತೂ ಹರಿದಾಗ
ಎದೆಗೂಡಿನೊಳು ಚಿಗುರೊಡೆದ ನೆನಪುಗಳ
ಒರೆಸಿಟ್ಟ ಮುಗ್ದ ಬೆರಳು
ಬೆಳಕು ಸಾಯುವ ಮುನ್ನ ಬೀಡು ಸೇರುವ
ತವಕ, ಗೆಜ್ಜೆ ದನಿಗಳ ನಡುವೆ ಸರಿದ ನೆರಳು

ಹೃದಯದಲಿ ಅದುಮಿಟ್ಟ ನೋವಿನಾ ಸೆಲೆಯು
ಹಾಡಾಗಿ ಉಕ್ಕಿ ಕಪ್ಪು ತುಟಿಗಳಲಿ
ಉಸಿರ ಬಿಗಿ ಹಿಡಿದು ಬಿಕ್ಕಿ
ಅತ್ತಾಗ, ಬಾಹು ಬಲವಿಲ್ಲದೆ
ಬಾಹುಬಲಿಗಳಾದೆವು ಒಂದೆಡೆ
ಇನ್ನೊಂದೆಡೆ ಭವಿಷ್ಯ ನುಡಿಯುವ
ಮಂಡ ಕಪ್ಪೆಗಳಾಗಿ
ಸುಖದ ರೂಪದ ಬಯಕೆ ದುಃಖದಲಿ
ದಿನರಾತ್ರಿ ಹದವಾಗಿ ಹರಿಯುತಿರೆ
ಗುರಿಯಿರದ ದಾರಿಯೊಳು ತೆವಳುವೆವು
ನಿಡುಸುಯ್ವ ಕ್ಷಿತಿಜದಂಚಿಗೆ.

Comments

ಸತೀಶ್ said…
ಕನಸುಗಳ ಮರಳದಂಡೆಯಲಿ
ನೋವ ಹೊತ್ತು ನಡೆವೆವು
ಬೆನ್ನಿಗಂಟಿದ ಹೊಟ್ಟೆ....

ಇದೀಷ್ಟು ಸಾಕು ಮನುಷ್ಯ ಅನ್ನುವವನಿಗೆ ಬದುಕಲು. ಹಸಿದ ಹೊಟ್ಟೆಯ ನಡುವೆಯೂ ಬದಕುವ ದಾರಿ ಹುಡುಕುವುದು ಇದ್ದರೆ ಅದು ಕನಸಿನ ಮೂಲಕವೇ ಅಲ್ಲವೇ ?
ಸತೀಶ್ said…
ಕನಸುಗಳ ಮರಳದಂಡೆಯಲಿ
ನೋವ ಹೊತ್ತು ನಡೆವೆವು
ಬೆನ್ನಿಗಂಟಿದ ಹೊಟ್ಟೆ....

ಇದೀಷ್ಟು ಸಾಕು ಮನುಷ್ಯ ಅನ್ನುವವನಿಗೆ ಬದುಕಲು. ಹಸಿದ ಹೊಟ್ಟೆಯ ನಡುವೆಯೂ ಬದಕುವ ದಾರಿ ಹುಡುಕುವುದು ಇದ್ದರೆ ಅದು ಕನಸಿನ ಮೂಲಕವೇ ಅಲ್ಲವೇ ?

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ