ಪಪ್ಪನೂ...ನನ್ನ ನಿದ್ದೆಯೂ


ಪಪ್ಪನ ಬಗ್ಗೆ ಏನು ಹೇಳುವಾಗಲೂ ನಾನು ಹಾಗೇನೇ...ನಾನ್ಸ್ಟಾಪ್...ಅವರ ಬಗ್ಗೆ ಹೇಳಿದಷ್ಟು ಮುಗಿಯುವುದಿಲ್ಲ. ಅಫ್ಕೋರ್ಸ್, ಅವರ ಬಗ್ಗೆ ಬರೆಯುವಾಗಲೂ ಅಷ್ಟೇ... ಕೀಲಿಮಣೆಯಲ್ಲಿ ಬೆರಳುಗಳು ಸರಾಗವಾಗಿ ಓಡುತ್ತವೆ. ಮೊನ್ನೆ ಗೆಳೆಯರೊಬ್ಬರು ಅವರ ಅಪ್ಪನ ಬಗ್ಗೆ ಬರೆದ ಲೇಖನದ ಲಿಂಕ್ ಕಳುಹಿಸಿ ಆ ಲೇಖನವನ್ನು ಅಮ್ಮನಿಗೆ ಓದೋಕೆ ಹೇಳಿದ್ದೆ. ಆ ಬ್ಲಾಗ್ ಬರಹದ ಬಗ್ಗೆ ಮಾತನಾಡುವಾಗ ನಿನ್ನ ಅಪ್ಪನ ಬಗ್ಗೆನೂ ಬರೀ ಅಂದಿದ್ರು ಅಮ್ಮ. ಈಗಾಗಲೇ ಅಪ್ಪನ ಬಗ್ಗೆ ಎರಡ್ಮೂರು ಬ್ಲಾಗ್ ಬರಹ ಬರೆದಾಗಿದೆ. ಇನ್ನೆಂಥದ್ದು ಬರೆಯುವುದು? ಎಂದು ಕೇಳಿದಾಗ ಅಮ್ಮ ಹೇಳಿದ್ದು..ಅಪ್ಪನ ನಿದ್ದೆ !

ಹೂಂ...ಅಪ್ಪನ ನಿದ್ದೆ ಬಗ್ಗೆ ಬರೆಯೋದೆ ತುಂಬಾ ಇಂಟರೆಸ್ಟಿಂಗ್. ಇತ್ತೀಚೆಗೆ ಅಂದ್ರೆ ನಿವೃತ್ತಿಯಾದ ನಂತರ ಮನೆಯಲ್ಲೇ ಕೂರುವ ಕಾರಣ ಅಪ್ಪ ಸಿಕ್ಕಾಪಟ್ಟೆ ನಿದ್ದೆ ಮಾಡ್ತಾರೆ. ಯಾವತ್ತು ನೋಡಿದರೂ ಅದೇ ಕೈರಳಿ, ಮನೋರಮ, ಏಷ್ಯಾನೆಟ್ ನ್ಯೂಸ್ ನೋಡ್ತಾ ಇರ್ತಾರೆ ಎಂದು ಅಮ್ಮ ಗೊಣಗುತ್ತಿದ್ದರೂ, ನ್ಯೂಸ್ ನೋಡ್ತಾ ನೋಡ್ತಾ ಅಪ್ಪ ನಿದ್ದೆ ಮಾಡಿಬಿಡುತ್ತಾರೆ. ಅದೇ ವೇಳೆ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ನ ಸೌಂಡ್ ಕೇಳಿದ್ರೆ, ಥಟ್ಟನೆ ಎಚ್ಚರ ಆಗುತ್ತೆ. ಮಾತ್ರವಲ್ಲ ಹಿತ್ತಲಿನ ಯಾವ ಮೂಲೆಯಲ್ಲಿ ತೆಂಗಿನಕಾಯಿ ಬಿದ್ರೂನೂ ಅಪ್ಪನಿಗೇ ಮೊದಲು ಗೊತ್ತಾಗೋದು. ಹೀಗೆ ವಾಹಿನಿಗಳು 5 ನಿಮಿಷಕ್ಕೊಮ್ಮೆ ಬ್ರೇಕಿಂಗ್ ನ್ಯೂಸ್ ಸದ್ದು ಮಾಡುತ್ತಿದ್ದರೆ, ಅಪ್ಪ ಅರೆ ನಿದ್ದೆಯಲ್ಲೇ ಸುದ್ದಿ ನೋಡುತ್ತಾರೆ.

ಅಂದಹಾಗೆ, ಸುದ್ದಿ ಬಗ್ಗೆ ಹೇಳುವಾಗಲೇ ನೆನಪಿಗೆ ಬಂದದ್ದು...ಚಿಕ್ಕಂದಿನಲ್ಲಿ ದಿನಪತ್ರಿಕೆಗಳ ಬಗ್ಗೆ ನನ್ನಲ್ಲಿ ಆಸಕ್ತಿ ಹುಟ್ಟಿಸಿದ್ದೇ ಅಪ್ಪ. ಮನೆಯಲ್ಲಿ ಕನ್ನಡ, ಇಂಗ್ಲಿಷ್, ಮಲಯಾಳಂ ಪತ್ರಿಕೆಗಳಂತೂ ಯಾವತ್ತೂ ಇರುತ್ತಿದ್ದವು. ಭಾನುವಾರದ ಪತ್ರಿಕೆಗಳಂತೂ ಯಾವತ್ತೂ ಮಿಸ್ ಆಗುತ್ತಿರಲಿಲ್ಲ. ಸಾಪ್ತಾಹಿಕದಲ್ಲಿ ಓದೋಕೆ ಸಾಕಷ್ಟು ಇರುತ್ತೆ ಎಂದು ಹೇಳಿ ಬೆಳಗ್ಗೆಯೇ ಪೇಟೆಗೆ ಹೋಗಿ ಪತ್ರಿಕೆ ಖರೀದಿಸುತ್ತಿದ್ದರು ಅಪ್ಪ. ಚಿಕ್ಕವಳಿರುವಾಗ ನನಗೆ ಮಲಯಾಳಂ ಓದೋಕೆ ಬರುತ್ತಿರಲಿಲ್ಲ. ಆವಾಗ ಅಪ್ಪನೇ ಮಲಯಾಳಂ ಪತ್ರಿಕೆಗಳನ್ನು ಓದಿ ಹೇಳುತ್ತಿದ್ದರು. ಸಂಜೆ ಹೊತ್ತು ನಮ್ಮ ಮನೆಯಲ್ಲಿ ಸುದ್ದಿವಾಚನವೇ ಜೋರಾಗಿ ಇರುತ್ತಿತ್ತು. ಟೀ ಕುಡಿಯುವ ಹೊತ್ತಲ್ಲಿ ಸುದ್ದಿ ಬಗ್ಗೆಯೇ ಚರ್ಚೆಯಾಗುತ್ತಿದ್ದು, ಅದೊಂದು ಪೇನಲ್ ಡಿಸ್ಕಶನ್ ತರಾನೇ ಇರುತ್ತಿತ್ತು.

ಹಾಂ...ನಾನು ಹೇಳೋಕೆ ಹೋಗಿದ್ದು ನಿದ್ದೆ ಬಗ್ಗೆ ತಾನೇ?.ಹೇಳ್ತೀನಿ ಕೇಳಿ... ಶಾಲಾ ಕಾಲೇಜು ದಿನಗಳಲ್ಲಿ ನಿದ್ರಾಪ್ರಿಯೆ ನಾನು. ಕ್ಲಾಸಿನಲ್ಲಿ ತೂಕಡಿಸುತ್ತಾ ಇದ್ದು, ಅದೆಷ್ಟೋ ಬಾರಿ ಟೀಚರ್ ಬಿಸಾಡಿದ ಚಾಕ್ ಪೀಸ್ಗಳು ನನ್ನ ನಿದ್ದೆಗೆ ಭಂಗ ತಂದಿವೆ. ಹಾಗಂತ ಸುಮ್ ಸುಮ್ನೆ ಏನೂ ನಿದ್ದೆ ಮಾಡಲ್ಲ.. ಪ್ರತಿಯೊಂದು ನಿದ್ದೆಯಲ್ಲೂ ಒಂದೊಂದು ಕನಸು. ಕಣ್ಣು ಮುಚ್ಚಿದರೆ ಸಾಕು ಕನಸು ಕಾಣುವ ಜೀವಿ ನಾನು. "ಕ್ಲಾಸಿನಲ್ಲಿ ನಿದ್ದೆ ಮಾಡುವವರು ಪುಣ್ಯವಂತರು ಅವರಿಗೆ ಅವರ ಕನಸುಗಳು ನಷ್ಟವಾಗುವುದಿಲ್ಲವಲ್ಲಾ" ಎಂದು ಕವಿ ಸಚ್ಚಿದಾನಂದನ್ ಹೇಳಿದ್ದು ನಮ್ಮಂಥವರನ್ನು ಉದ್ದೇಶಿಸಿಯೇ. ಹೋಗಲಿ ಬಿಡಿ, ಬೆಳಗ್ಗೆ ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿರುವ ಕಾರಣ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಆವಾಗೆಲ್ಲಾ ಪುಸ್ತಕಗಳನ್ನು ಓದುತ್ತಾ ಕೂರುತ್ತಿದ್ದೆ. ಆದರೆ ಪಠ್ಯಪುಸ್ತಕಗಳನ್ನು ಹಿಡಿದರೆ ಸಾಕು ಕ್ಷಣಮಾತ್ರಕ್ಕೆ ನಿದ್ರಾದೇವಿ ನನ್ನನ್ನು ಆವರಿಸಿಬಿಡುತ್ತಿದ್ದಳು. ಇನ್ನು ಪರೀಕ್ಷಾ ಸಮಯದಲ್ಲಂತೂ ಹೇಳುವುದೇ ಬೇಡ. ಕೊನೇಕ್ಷಣದಲ್ಲಿ ಪರೀಕ್ಷಾ ಸಿದ್ಧತೆ ನಡೆಸುವ ಸ್ವಭಾವ ನನ್ನದಾಗಿದ್ದರಿಂದ ಪರೀಕ್ಷೆ ಬಂತೆಂದರೆ ಚಡಪಡಿಕೆ. ಅದರೆಡೆಯಲ್ಲಿ ಹಾಳಾದ ನಿದ್ದೆ ಬೇರೆ. ಪರೀಕ್ಷೆಗೆ ಮುನ್ನಾದಿನವಂತೂ ವಿಪರೀತ ನಿದ್ದೆ. ಪುಸ್ತಕ ತೆರೆದಿಟ್ಟು ಅಲ್ಲೇ ನಿದ್ದೆ ಹೋದರೆ ಅಮ್ಮ ಬಂದು ಎಬ್ಬಿಸಿ ಮತ್ತೆ ಓದುವಂತೆ ಒತ್ತಾಯಿಸುತ್ತಿದ್ದರು. ಆದರೆ ಅಪ್ಪ ಹಾಗಲ್ಲ...ನಿನಗೆ ತುಂಬಾ ಸುಸ್ತಾಗಿದೆ.. ಹೋಗಿ ಮಲಗು..ಬೆಳಗ್ಗೆ 4 ಗಂಟೆಗೆ ಬೇಗ ಎದ್ದು ಓದುವಿಯಂತೆ ಎಂದು ಹೇಳಿ ಮಲಗಿಸುತ್ತಿದ್ದರು. ಆದರೆ ಬೆಳಗ್ಗೆ ಏಳುವಾಗ ಗಂಟೆ 7.30! ಸಮಯ ನೋಡಿ ಅಪ್ಪ ಯಾಕೆ ನನ್ನನ್ನು ಎಬ್ಬಿಸಿಲ್ಲ? ಎಂಬ ರಂಪಾಟ ಶುರು ಮಾಡುತ್ತಿದ್ದೆ. ಆವಾಗ ಅಪ್ಪ..ನೀನು ತುಂಬಾ ಗಾಢ ನಿದ್ದೆಯಲ್ಲಿದ್ದೆ..ಆ ನಿದ್ದೆಯಿಂದ ನಿನ್ನನ್ನು ಎಬ್ಬಿಸೋಕೆ ಮನಸು ಬರಲ್ಲ ಎನ್ನುತ್ತಿದ್ದರು. ನಾನು ಸ್ವಲ್ಪ ಆಕಳಿಸಿದರೆ ಸಾಕು..ನಿದ್ದೆ ಬರ್ತಿದೆಯಾ ಹೋಗಿ ಮಲಗು ಅಂತಿದ್ದರು. ಅಮ್ಮ ಮಧ್ಯಾಹ್ನ ಹೊತ್ತು ಹೆಣ್ಮಕ್ಕಳು ನಿದ್ದೆ ಮಾಡಬಾರದು ಎಂದು ಗದರಿಸುತ್ತಿದ್ದರೂ, ಪಾಪ..ಮಕ್ಕಳು ನಿದ್ದೆ ಬಂದಾಗ ನಿದ್ದೆ ಮಾಡ್ಬೇಕು, ಎಲ್ಲರಿಗೂ ಎಲ್ಲ ಸಮಯದಲ್ಲೂ ನಿದ್ದೆ ಬರುವುದಿಲ್ಲ ಎಂದು ಹೇಳುವ ಮೂಲಕ ಅಪ್ಪ ನಿದ್ದೆ ಬಗ್ಗೆ ತಮ್ಮ ವಾದ ಮಂಡಿಸುತ್ತಿದ್ದರು.

ನಾವು ಎಲ್ಲಿಗಾದರೂ ದೂರ ಯಾತ್ರೆ ಹೋದರೂ ಅಷ್ಟೇ..ಸುಸ್ತಾದರೆ ಪಪ್ಪನ ತೋಳಲ್ಲಿ ತಲೆಯಿಟ್ಟು ಮಲಗೋಕೆ ನನಗಿಷ್ಟ. ಮನೆಯಲ್ಲಿ ಅಪ್ಪ ಗೋಡೆಗೊರಗಿ ಕುಳಿತುಕೊಂಡರೆ ಸಾಕು, ಅಪ್ಪನ ಮಡಿಲಲ್ಲಿ ಸುಖ ನಿದ್ದೆ. ಆದ್ರೆ ಒಬ್ಬಳೇ ಯಾತ್ರೆ ಮಾಡುವಾಗ ಎಷ್ಟೇ ಸುಸ್ತಾಗಿರಲಿ, ಒಂಚೂರು ಕಣ್ಣುಮುಚ್ಚದೆ ಎಚ್ಚರದಿಂದಲೇ ಇರುವ ಜಾಯಮಾನ ನನ್ನದು. ದಿನಾ ಮನೆಗೆ ಫೋನ್ ಮಾಡಿದರೆ, ಅಮ್ಮ ಏನಾದರೂ ಬರೆದಿದ್ದೀಯಾ? ಏನೆಲ್ಲಾ ಓದಿದೆ ಎಂಬ ಪ್ರಶ್ನೆ ಕೇಳ್ತಾರೆ. ಆದ್ರೆ ಅಪ್ಪ ಹಾಗಲ್ಲ...ಪುಟ್ಟಾ... ಚೆನ್ನಾಗಿ ನಿದ್ದೆ ಮಾಡುತ್ತೀಯಾ? ಚೆನ್ನಾಗಿ ನಿದ್ದೆ ಮಾಡ್ಬೇಕು, ನಿದ್ದೆ ಬಿಟ್ಟು ಓದೋದು ಬರೆಯೋದು ಮಾಡ್ಬೇಡ...ಆರೋಗ್ಯ ಹಾಳಾಗುತ್ತೆ ಅಂತಾರೆ. ಬೆಂಗಳೂರಿನಿಂದ ಊರಿಗೆ ಹೋಗುವುದಾದರೆ ರಾತ್ರಿಯಿಡೀ ಪ್ರಯಾಣ ಮಾಡಿ ಬೆಳ್ಳಂಬೆಳಗ್ಗೆ ಮನೆಗೆ ತಲುಪುತ್ತೇನೆ. ಮನೆ ತಲುಪಿದ ಕೂಡಲೇ ಸ್ನಾನ ಮುಗಿಸಿ ಅಪ್ಪನ ಪಕ್ಕ ಹೋಗಿ ಮಲಗಿದರೆ, ಅದೆಂಥಾ ಗಾಢ ನಿದ್ರೆ! ಅಲ್ಲಿಯವರೆಗಿದ್ದ ಕೆಲಸದ ಒತ್ತಡ, ಪ್ರಯಾಣದ ಆಯಾಸವೆಲ್ಲಾ ಪಪ್ಪನ ತೋಳಲ್ಲಿ ತಲೆಯಿಟ್ಟು ಮಲಗಿದರೆ ಮಾಯವಾಗಿ ಬಿಡುತ್ತದೆ.

ಕಚೇರಿಯಲ್ಲಿ ನೈಟ್ಶಿಫ್ಟ್ ಮಾಡುವುದರಿಂದ ಬೆಳಗ್ಗಿನ ಹೊತ್ತು ನಿದ್ದೆ ಮಾಡುವುದು ಕೂಡಾ ಕಷ್ಟವಾಗಿದೆ. ಅದರಲ್ಲೂ ರೂಮ್ಮೇಟ್ಸ್ಗಳ ಗಲಾಟೆ, ಫೋನ್ ಮಾತುಕತೆ ಎಲ್ಲವನ್ನೂ ಸಹಿಸಿಕೊಂಡು ಅಸಮಯದಲ್ಲಿ ನಿದ್ದೆಗೆ ಜಾರಲು ಹರಸಾಹಸ ಪಡಬೇಕಾಗುತ್ತದೆ. ಇಲ್ಲಿಯವರೆಗೆ ಅಪ್ಪ ನಿದ್ದೆಯ ಬಗ್ಗೆ ಲೆಕ್ಚರ್ ಕೊಡುವಾಗ ನಕ್ಕು ತಮಾಷೆಯಾಗಿ ಪರಿಗಣಿಸುತ್ತಿದ್ದ ನನಗೆ ಇದೀಗ ನಿದ್ದೆ ಎಷ್ಟು ಅಮೂಲ್ಯ ಎಂಬುದು ಅರ್ಥವಾಗುತ್ತಿದ್ದೆ. ರಾತ್ರಿಪಾಳಿ ಮುಗಿಸಿ ಬೆಳಗ್ಗಿನ ಜಾವ 4 ಗಂಟೆಗೆ ಮನೆ ಸೇರಿದರೂ ಆಮೇಲೆ ನಿದ್ದೆ ಬರಬೇಕಾದರೆ ಅಷ್ಟೇ ಒದ್ದಾಡಬೇಕು. ಏತನ್ಮಧ್ಯೆ, ಭಾನುವಾರ ಲೇಟಾಗಿ ಹೋದರೆ ಅಂಗಡಿಯಲ್ಲಿ ಪೇಪರ್ ಖಾಲಿಯಾಗುತ್ತದೆ ಎಂದು 6 ಗಂಟೆಗೇ ಎದ್ದು ರೂಮಿನಿಂದ ಹೊರಬರುವಾಗ ಹಾಸ್ಟೆಲ್ನ ಹುಡುಗಿಯರೆಲ್ಲಾ ರಜಾ ದಿನದ ನಿದ್ದೆ ಎಂಜಾಯ್ ಮಾಡುತ್ತಿರುತ್ತಾರೆ. ಬೆಳಗ್ಗೆದ್ದು ಪೇಪರ್ ಓದಿ ಮುಗಿಸಿ, ಮನೆಗೆ ಫೋನ್ ಮಾಡಿದರೆ ನೀನ್ಯಾಕೆ ಇಷ್ಟು ಬೇಗ ಎದ್ದೆ? ಹೋಗಿ ತಿಂಡಿ ತಿಂದು ನಿದ್ದೆ ಮಾಡು ಅಂತಾರೆ ಅಪ್ಪ. ಫೋನ್ ಡಿಸ್ಕನೆಕ್ಟ್ ಮಾಡಿದ ಕೂಡಲೇ ನಾನು ನಿದ್ದೆಗೆ ಜಾರಿರುತ್ತೇನೆ ಎಂದು ಅಪ್ಪ ಅಂದುಕೊಂಡಿರುತ್ತಾರೆ. ಹಾಸ್ಟೆಲ್ನ ಗೌಜಿ ಗದ್ದಲಗಳ ನಡುವೆ ಚಡಪಡಿಸುತ್ತಾ ನಾನು ಕಣ್ಮುಚ್ಚಿ ನಿದ್ದೆಗಾಗಿ ಕಾಯುತ್ತಿರುತ್ತೇನೆ. ಅರೆಬರೆ ನಿದ್ದೆ ಮುಗಿಸಿ ಮತ್ತೆ ಸುದ್ದಿ ಮನೆ ಸೇರಿದರೆ ಮತ್ತೆ ಕೆಲಸ ಮುಗಿಯುವವರೆಗೆ ನಿದ್ದೆ ನನ್ನ ಪಕ್ಕ ಸುಳಿಯುವುದೇ ಇಲ್ಲ. ಅಲ್ಲಿ... ಮನೆಯಲ್ಲಿ ಅಪ್ಪ ಸುದ್ದಿ ನೋಡುತ್ತಾ ತೂಕಡಿಸುತ್ತಿರುತ್ತಾರೆ.

ಇವತ್ತು ಅಪ್ಪಂದಿರ ದಿನ ಅಲ್ವಾ...ಆದ್ದರಿಂದ ಅಪ್ಪನ ಬಗ್ಗೆ ಇಷ್ಟೆಲ್ಲಾ ಬರೆಯಬೇಕಾಗಿ ಬಂತು ನೋಡ್ರಿ...

ಹ್ಯಾಪಿ ಫಾದರ್ಸ್ ಡೇ...

ಫೋಟೋ ಕೃಪೆ: ಅಂತರ್ಜಾಲ ಚಿತ್ರ

Comments

ಹೇಳುತ್ತಾರೆ ನಿದ್ದೆಯಲ್ಲಿ ಮಕ್ಕಳು ಬೆಳೆಯುತ್ತವೆ
ದೊಡ್ಡವರಾಗುತ್ತ ನಿದ್ದೆಯಲ್ಲಿ ಕನಸುಗಳು ಬೆಳೆಯುತ್ತಾ ಹೋಗುತ್ತವೆ
ಆ ಕನಸುಗಳನ್ನು ಬೆಳೆಸುವ, ಪೋಷಿಸುವ ಪಟ್ಟ ಅಪ್ಪ ಅಮ್ಮ ತೆಗೆದುಕೊಂಡುಬಿಡುತ್ತಾರೆ
ಇಂತಹ ಒಂದು ಸವಿ ನಿದ್ದೆಯ ಬಗ್ಗೆ ಹೇಳುತ್ತಲೇ ಅಪ್ಪನ ವಿಶೇಷ ಗುಣಗಳನ್ನು ಹೇಳುತ್ತಾ ಕಾಳಜಿ ತೋರಿಸುವ ಪರಿ ಇಷ್ಟವಾಯಿತು
ಸುಂದರ ಲೇಖನ
@Srikanth Manjunath
ನಿಮ್ಮ ಮೆಚ್ಚುಗೆಗೆ ನನ್ನೀ

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ