ಗಾಂಧಿ ಬಾ...
ಮೂರು ದಾರಿ ಸೇರುವ ಜಂಕ್ಷನ್ನಲ್ಲಿ
ಕಲ್ಲಿನಲಿ ಕೆತ್ತಿದ ಪ್ರತಿಮೆಯಾಗಿ
ಪ್ರತಿಭಟನೆಗೂ, ಸತ್ಯಾಗ್ರಹಕ್ಕೂ
ಮೌನ ಸಾಕ್ಷಿಯಾಗಿ
ನಿಂತಿರುವ ಭೈರಾಗಿ
ಸರ್ಕಾರಿ ಕಚೇರಿಗಳ ಗೋಡೆಗೆ
ತೂಗು ಹಾಕಿದ ಫೋಟೋಗಳಲಿ
ಭ್ರಷ್ಟಾಚಾರಿಗಳ ನೋಡಿ
ಮರುಗುತ್ತಾ
ಲಂಚದ ನೋಟಿನ ಕಂತೆಗಳಲಿ
ನಗುತಿಹನು ಗಾಂಧಿ
ನೀ ಮಹಾತ್ಮ...ಅಹುದಹುದು
ರಾಷ್ಟ್ರಪಿತ ಎಂದು ಕರೆದಿದ್ದರೂ
ಸಂವಿಧಾನದ 18 (1) ಪರಿಚ್ಛೇದ ಪ್ರಕಾರ
ಇದು ಅಸಂವಿಧಾನಿಕವಂತೆ!
ನಿನ್ನ ಆತ್ಮಕತೆಯನ್ನೋದಿ
ಮನದಲ್ಲೇ ಧ್ಯಾನಿಸಿದೆ
ಗಾಂಧಿ ಸಿನಿಮಾದಲ್ಲಿನ ಪಾತ್ರಧಾರಿಯೇ
ಕಣ್ಮುಂದೆ ಬಂದಾಗ
ಕಣ್ಣು ತೆರೆದೆ...
ನೀನು ಕಣ್ಮುಚ್ಚಿ ನಕ್ಕಿರಬಹುದೆ?
ನಿನ್ನ ಮೇಲೆ ಆರೋಪಗಳನ್ನು
ಹೊರಿಸಿ ಪತ್ರಿಕೆ,
ಫೇಸುಬುಕ್, ಟ್ವೀಟರ್ ಗಳಲ್ಲಿ
ಗಾಂಧಿ ಹೀಗಿದ್ದರು ಎಂದು ಜರೆಯುವಾಗ
ಮನದಲ್ಲಿ ಕಸಿವಿಸಿ
ನೀನದಕೆ ಉತ್ತರ ನೀಡುವಂತಿದ್ದರೆ...
ಅಹಿಂಸೆಯೇ ಧರ್ಮ
ಸತ್ಯವೇ ಬಲವೆಂದು
ಬಾಳಿ ಬದುಕಿದ
ನೀನು
ಸ್ವಾತಂತ್ರ್ಯ ಸಿಕ್ಕಿದಾಗಲೂ
ದೇಶ ವಿಭಜನೆಯ ನೋವಲ್ಲಿ
ಸ್ವಾತಂತ್ರ್ಯದ ಸವಿಯುಣ್ಣಲಿಲ್ಲ
ಕೊನೆಗೆ ಗೋಡ್ಸೆಯ ಗುಂಡೊಂದು
ನಿನ್ನೆದೆಯ ಸೀಳಿದಾಗ
ಹೇ ರಾಮ್ ಎಂಬ ಕೊನೆಯ
ಮಾತಲ್ಲಿ ಎಲ್ಲವೂ ಹೇಳಿಬಿಟ್ಟೆ!
ಹೇ...ಸಬರ್ಮತಿಯ ಸಂತ
ಮತ್ತೊಮ್ಮೆ ಹುಟ್ಟಿ ಬರುವಿಯಾದರೆ
ಬೇಗ ಬಾ...
ಆದರೆ ಒಂದು ಕಂಡೀಷನ್
ಈ ನೆಲದಲ್ಲಿ ಕಾಲಿಡದೆ
ಮನದಲ್ಲಿ ಸ್ಫೂರ್ತಿ ಸೆಲೆಯಾಗಿ ಬಾ...
Comments
ಒಳ್ಳೆಯ ಕವನ.
http://badari-poems.blogspot.in/
ಧನ್ಯವಾದಗಳು ಸರ್