ಮದರಂಗಿ ಪುರಾಣ
ಕೈಗಳಿಗೆ ಮದರಂಗಿ ಹಚ್ಚಿ ಸಿಂಗರಿಸುವುದು ಯಾರಿಗೆ ಇಷ್ಟ ಇಲ್ಲ ಹೇಳಿ? ಚಿಕ್ಕಂದಿನಿಂದಲೂ ನನಗೆ ಕೈ ಕಾಲಲ್ಲಿ ಮದರಂಗಿ ಚಿತ್ತಾರ ಬಿಡಿಸುವುದೆಂದರೆ ತುಂಬಾ ಇಷ್ಟ. ಕೃಷ್ಣವರ್ಣವಾಗಿರುವುದರಿಂದ ನನ್ನ ಕಾಲಲ್ಲ ಕೆಂಪು ಬಣ್ಣ ಎದ್ದು ಕಾಣುತ್ತಿರಲಿಲ್ಲ...ಆದ್ರೆ ಅಂಗೈ ತುಂಬಾ ಕೆಂಪು ಕೆಂಪು ಚಿತ್ತಾರ. ಅದೂ ಎರಡೂ ಕೈಗೆ. ಎರಡೂ ಕೈಗಳಿಗೆ ಮದರಂಗಿ ಹಚ್ಚಿದ್ದನ್ನು ನೋಡಿ ಗೆಳತಿಯರು ನೀನೇನು ಮದುಮಗಳಾ? ಎಂದು ಕೇಳಿದರೆ ಐ ಡೋಂಟ್ ಕೇರ್. ಮದರಂಗಿಯ ಕೆಂಪು, ಕಂಪು ನನಗೆ ಖುಷಿ ಕೊಡುತ್ತದೆ ಎಂದಾದರೆ ನಾನ್ಯಾಕೆ ಇಂಥಾ ಪ್ರಶ್ನೆಗಳಿಗೆ ತಲೆ ಕೆಡಿಸಿಕೊಳ್ಳಲಿ? ಜನ್ಮಾಷ್ಟಮಿ ಬಂದರಂತೂ ಕೈಯಲ್ಲಿ ಮೆಹಂದಿ ಇರಲೇ ಬೇಕು. ಇನ್ನು ಸಂಬಂಧಿಕರ ಮದುವೆ ಹೋಗುವಾಗ ಕೈಯಲ್ಲಿ ಮದರಂಗಿ ಇಲ್ಲದೇ ಇದ್ದರೆ ಹೇಗೆ? ಏನಿದ್ದರೂ ಮೆಹಂದಿ ಹಚ್ಚಿಕೊಳ್ಳುವ ಸಂಭ್ರಮ, ಆ ಚಿತ್ತಾರದ ಸೊಬಗನ್ನು ನೋಡಿ ಆಸ್ವಾದಿಸುವ ಪರಿ ಇದೆಲ್ಲವೂ ಪದಗಳಿಗೆ ನಿಲುಕದ್ದು..
ಈಗಿನ ಜಮಾನದ ಮಕ್ಕಳಂತೆ ನಾವು ಚಿಕ್ಕವರಿರುವಾಗ ಮೆಹಂದಿ cone ಬಳಸುತ್ತಲೇ ಇರಲಿಲ್ಲ. ಮನೆಯ ಮುಂದೆ ಮದರಂಗಿ ಗಿಡ ಇತ್ತು. ಅದರ ಎಲೆ ಕೊಯ್ದು...ನುಣ್ಣನೆ ಅರೆದು ಅದಕ್ಕೆ ಅಳೆದು ತೂಗಿ ನೀರು ಹಾಕಿ ಕೈಗೆ ಮೆತ್ತುತ್ತಿದ್ದೆವು. ಮದರಂಗಿ ಕೆಂಪಾಗಲಿ ಎಂದು ಅದಕ್ಕೆ ಚಹಾ Decoction ಹಾಕ್ತಿದ್ದೆವು. ಇಲ್ಲದೇ ಇದ್ದಲ್ಲಿ ಮೆಹಂದಿ ಒಣಗುತ್ತಿದ್ದಂತೆ ಸಕ್ಕರೆ ನೀರು ಇಲ್ಲವೇ ಲಿಂಬೆ ಹುಳಿ ಹಿಂಡುತ್ತಿದ್ದೆವು. ಅಕ್ಕ ಹಾಸ್ಟೆಲ್್ನಲ್ಲಿದ್ದ ಕಾರಣ ನನ್ನ ಕೈಗೆ ಮದರಂಗಿ ಹಚ್ಚುತ್ತಿದ್ದುದ್ದು ಅಮ್ಮನೇ. ಸಂಜೆ ಹೊತ್ತು ಮದರಂಗಿಯನ್ನು ಅರೆದು ತೆಂಗಿನ ಗೆರಟೆಯಲ್ಲಿರಿಸುತ್ತಿದ್ದರು ಅಮ್ಮ. ನಾನಂತೂ ಅದನ್ನು ಹತ್ತಾರು ಬಾರಿ ಹೋಗಿ ನೋಡಿ ಗೆರಟೆ ಕೆಂಪಾಗಿದೆಯೋ ಎಂದು ಪರೀಕ್ಷಿಸುತ್ತಿದ್ದೆ. ರಾತ್ರಿ ಊಟ ಮಾಡಿದ ಮೇಲೆ ಮದರಂಗಿ ಹಾಕ್ತೀನಿ ಅಂತಾ ಅಮ್ಮ...ನಮ್ಮ ಊಟ ಮುಗಿದ ಮೇಲೆ ಅಮ್ಮ ಅಡುಗೆಮನೆಯ ಕೆಲಸ ಮುಗಿಸಿ ಬಂದಳೆಂದರೆ ಖುಷಿಯೋ ಖುಷಿ. ಅಮ್ಮನ ಮಡಿಲಲ್ಲಿ ಅಂಗೈಯನ್ನಿಟ್ಟು ಕುಳಿತರೆ, ಅಮ್ಮ ಅಂಗೈಯಲ್ಲೆಲ್ಲಾ ಚಿಕ್ಕ ಚಿಕ್ಕ ಚುಕ್ಕಿಯನ್ನಿಡುತ್ತಿದ್ದರು. ಕೈ ಅಲ್ಲಾಡಿಸಿದರೆ ದೊಡ್ಡ ಚುಕ್ಕಿಯಾಗಿ ಬಿಡುತ್ತಿತ್ತು. ಮದರಂಗಿ ಚೆಂದ ಕಾಣಬೇಕೆಂಬ ಆಸೆಯಿಂದ ನಿದ್ದೆ ಬಂದರೂ ಅದನ್ನು ಹಿಡಿದಿಟ್ಟು ಕೈ ಅಲುಗಾಡಿಸದೆ ಕೂತಿರುತ್ತಿದ್ದೆ.
ನನಗೆ ಒಂದು ಕೈಗೆ ಮದರಂಗಿ ಇಟ್ಟರೆ ಸಾಲದು ಇನ್ನೊಂದು ಕೈಗೂ ಇಡಬೇಕಾಲ್ವಾ? ಇನ್ನೊಂದು ಕೈಯಲ್ಲಿ ಬೇರೆ ಡಿಸೈನ್..ಅದೇನು ಗೊತ್ತಾ? ಅಂಗೈ ಮಧ್ಯೆ ಒಂದು ದೊಡ್ಡ ಬೊಟ್ಟು. ಅದರ ಸುತ್ತಲೂ ನಾಲ್ಕು ಚಿಕ್ಕ ಬೊಟ್ಟು..ಬೆರಳಿನುದ್ದಕ್ಕೂ ಒಂದು ಗೆರೆ ಎಳೆದು ಅದಕ್ಕೆ ಹತ್ತಾರು ಕವಲುಗಳು...ಬೆರಳ ತುದಿಗೆ ಸ್ವಲ್ಪ ಮದರಂಗಿ ಮೆತ್ತಿದರೆ ಮುಗೀತು. ಇನ್ನೂ ಸ್ಲಲ್ಪ ದೊಡ್ಡವಳಾದ ಕೂಡಲೇ ಅಮ್ಮ ಇಡುತ್ತಿದ್ದ ಡಿಸೈನ್ "ಡಬ್ಬಾ" ಅಂತಾ ಅನಿಸಿ ಬಿಡ್ತು. ಆವಾಗ ಶುರುವಾಯ್ತು ನೋಡಿ ಹುಡುಕಾಟ. ಅದೇ ಮನೆಯ ಮುಂದಿನ ತೋಡಿನ ಬದಿಯಲ್ಲಿ ಬೆಳೆಯುವ ಯಾವುದೋ ಡಿಸೈನ್್ನಂತೆ ಕಾಣುವ ಎಲೆಯನ್ನು ತಂದು ಅಂಗೈ ಮೇಲಿಟ್ಟು ಅದರ ಮೇಲೆ ಮದರಂಗಿ ಸುರಿದದ್ದಾಯ್ತು. ಸ್ವಲ್ಪ ಹೊತ್ತು ಕಳೆದ ಮೇಲೆ ನೋಡಿದರೆ ಕೈಯೆಲ್ಲಾ ಕೆಂಪಾಯಿತೇ ವಿನಾ ಡಿಸೈನ್ ಬಂದಿರಲಿಲ್ಲ. ಹೋಗಲಿ ಬಿಡಿ ಇನ್ನೇನು ಮಾಡುವುದು ಎಂದು ಕೈಯಲ್ಲಿನ ಮದರಂಗಿ ಹೋಗಲು ಬಟ್ಟೆ ಒಗೆಯುವ ಕಲ್ಲಿಗೆ ಉಜ್ಜಿದ್ದೂ ಆಯ್ತು. ಇಷ್ಟೆಲ್ಲಾ ಆದ್ರೂ ಡಿಸೈನ್ ಬಿಡಿಸಬೇಕೆಂಬ ಹಠ ಮಾತ್ರ ಕಡಿಮೆಯಾಗಿರಲಿಲ್ಲ. ನನ್ನ ಗೆಳತಿಯರ ಕೈಯಲ್ಲಿ ವಿಧವಿಧದ ಡಿಸೈನ್ ಅದೂ ಮುಸ್ಲಿಂ ಮಕ್ಕಳ ಕೈಯಲ್ಲಿ ಡಿಸೈನ್ ನೋಡುವಾಗ ಆಸೆಯಾಗುತ್ತಿತ್ತು. ನನ್ನ ಕಾಟ ತಡೆಯಲಾರದೆ ಅಮ್ಮ ಒಂದು ದಿನ ಪ್ರಯೋಗ ಮಾಡಲು ಮುಂದಾದರು. ಆವಾಗ ನಾನು 3 ನೇ ಕ್ಲಾಸಿನಲ್ಲಿದ್ದೆ. ಅದೇನು ಗೊತ್ತಾ...ಹಲಸಿನ ಕಾಯಿಯ ಅಂಟು (ಒಣಗಿರುವುದು) ಅದನ್ನು ಸ್ವಲ್ಪ ಬಿಸಿ ಮಾಡಿ ಕೈಗೆ ಹನಿ ಹನಿಯಾಗಿ ಸುರಿದಿದ್ದರು. ಕಾದ ಅಂಟು ಕೈಗೆ ಬಿದ್ದು ಜುಂ ಅನಿಸಿದ್ದರೂ ಚೆನ್ನಾಗಿ ಡಿಸೈನ್ ಮೂಡುತ್ತದಲ್ವಾ ಎಂಬ ಆಸೆ. ಹಾಗೆ ಅಂಟಿನಲ್ಲಿ ಚಿಕ್ಕ ಚಿಕ್ಕ ಬೊಟ್ಟು ಇಟ್ಟು ಅದರ ಮೇಲೆ ಮದರಂಗಿ ಮೆತ್ತಿದರು ಅಮ್ಮ. ಅಂಟು ಇದ್ದ ಜಾಗ ಖಾಲಿ ಖಾಲಿಯಾಗಿದ್ದು ಬಾಕಿ ಜಾಗದಲ್ಲಿ ಕೆಂಪಾದ ಮದರಂಗಿ ಗೋಚರಿಸಿದರೆ ಅದೂ ಒಂದು ಡಿಸೈನ್!. ಆದರೇನು ಮಾಡುವುದು ಆ ಅಂಟು ಒಣಗಿ ಕೈಯಿಂದ ಎದ್ದು ಹೋಗಿ ಡಿಸೈನ್್ನ್ನು ಮದರಂಗಿ ನುಂಗಿತ್ತು. ಅಮ್ಮ ಈ ಪ್ರಯೋಗದ ನಂತರ ಇನ್ನೊಂದು ಪ್ರಯೋಗ ಮಾಡಿದರು. ಅದೇನೆಂದರೆ ಸುಣ್ಣದಲ್ಲಿ ಚಿಕ್ಕ ಚಿಕ್ಕ ಚುಕ್ಕಿಗಳನ್ನಿಟ್ಟು ಅದು ಒಣಗಿದ ಮೇಲೆ ಅದರ ಮೇಲೆ ಮದರಂಗಿ ಮೆತ್ತುವುದು. ಕೊನೆಗೂ ಇದು ಸ್ಲಲ್ಪ ವರ್ಕೌಟ್ ಆಯ್ತು. ಅಂತೂ ಅಮ್ಮ ನನ್ನ ಕೈಯಲ್ಲಿ ಹೊಸತೊಂದು ಡಿಸೈನ್ ಮಾಡಿಯೇ ಬಿಟ್ಟರು.
ಇನ್ನೂ ಸ್ವಲ್ಪ ದೊಡ್ಡವಳಾದ ಮೇಲೆ ಅಪ್ಪ ಪ್ಲಾಸ್ಟಿಕ್ ಡಿಸೈನ್ ತಂದು ಕೊಟ್ಟರು. ಆ ಡಿಸೈನ್ ತುಂಬಾ ದೊಡ್ಡದಾಗಿದ್ದುದರಿಂದ ನನ್ನ ಪುಟ್ಟ ಅಂಗೈಯಲ್ಲಿ ಸರಿಯಾಗಿ ಮೂಡುತ್ತಲೇ ಇರಲಿಲ್ಲ. ಹೈಸ್ಕೂಲ್್ಗೆ ಕಾಲಿಟ್ಟ ಮೇಲೆ ಮನೆಯಲ್ಲೇ ಅರೆದು ಮದರಂಗಿ ಇಡುವುದನ್ನು ಬಿಟ್ಟು cone ತೆಗೆದುಕೊಳ್ಳ ತೊಡಗಿದೆ. ಯಾವುದೇ ಹಬ್ಬ ಇರಲಿ, ವಿಶೇಷ ದಿನವಿರಲಿ ನನ್ನ ಕೈಯಲ್ಲಿ ಮದರಂಗಿ ರಾರಾಜಿಸುತ್ತಿತ್ತು. ಆವಾಗ ಡಿಸೈನ್ ಅಂದರೆ ಯಾವುದೋ ಒಂದು ಹೂವಿನ ಚಿತ್ರ..ಇಲ್ಲದೇ ಇದ್ದರೆ ಇಂಗ್ಲಿಷ್್ನಲ್ಲಿ ಆರ್ ಮತ್ತು ಎಸ್ (ಸಚಿನ್ ತೆಂಡೂಲ್ಕರ್ ಮೇಲಿನ ಪ್ರೀತಿಯಿಂದ) ಎಂದು ಬರೆಯುವುದು. ಕಾಲೇಜಿಗೆ ತಲುಪಿದಾಗ ಕೈಯಲ್ಲಿ ಹಾರ್ಟ್ (ಲವ್) ಚಿಹ್ನೆ. ಯಾರಿಗೂ ಗೊತ್ತಾಗದಂತೆ ಡಿಸೈನ್ ಮಧ್ಯೆ ಆವಾಗಿದ್ದ ಕ್ರಷ್್ನ ಮೊದಲಕ್ಷರ ಮೂಡುತ್ತಿತ್ತು. ಕಾಲೇಜಿನ ಗೆಳತಿಯರಲ್ಲಿ ಹೆಚ್ಚಿನವರಿಗೆ ಮೆಹಂದಿ ಡಿಸೈನ್ ಚೆನ್ನಾಗಿ ಗೊತ್ತಿತ್ತು, ಕೆಲವೊಮ್ಮೆ ಅವರೂ ನನ್ನ ಕೈಯಲ್ಲಿ ಡಿಸೈನ್ ಬಿಡಿಸುತ್ತಿದ್ದರು. ಹೀಗೆ ಅರೇಬಿಕ್, ಪರ್ಷಿಯನ್, ಇನ್ನೂ ಮತ್ತೇನೋ ಎಲ್ಲವೂ ನನ್ನ ಕೈಯಲ್ಲಿ ಇರುತ್ತಿತ್ತು. ಕಾಲೇಜು ಮುಗಿಸಿ ವೃತ್ತಿ ಜೀವನ ಆರಂಭಿಸಿದ ನಂತರ ಮೆಹಂದಿ ಹುಚ್ಚಿಗೆ ಸ್ವಲ್ಪ ಬ್ರೇಕ್ ಬಿತ್ತು. ಕೆಲಸ ನಿಮಿತ್ತ ದೂರದೂರಲ್ಲಿ ಪಿಜಿಯಲ್ಲಿರಬೇಕಾದ ಪರಿಸ್ಥಿತಿ. ಅಲ್ಲಿ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕಲ್ವಾ? ಮೆಹಂದಿ ಇಟ್ಟು ಕುಳಿತುಕೊಂಡರೆ ತಿನಿಸುವ, ಹಾಸಿಗೆ ಹಾಸಿಕೊಡುವ ಅಮ್ಮ ಅಲ್ಲಿಲ್ವಲ್ಲಾ? ಇನ್ನೊಂದು ಕೈಗೆ ಮೆಹಂದಿ ಹಚ್ಚಿದ ಕೂಡಲೇ ತಲೆ ತುರಿಕೆ ಇಲ್ಲದಿದ್ದರೆ ಬೆನ್ನು ತುರಿಕೆ ಆರಂಭವಾಗುತ್ತದೆ. ಆವಾಗೇನು ಮಾಡಲಿ? ಆ ಹೊತ್ತಲ್ಲೇ ಫೋನ್ ಬಂದರೆ? ಅದೂ ಕಷ್ಟವೇ...
ನನ್ನ ಅಮ್ಮನಿಗೆ ಡಿಸೈನ್ ಮಾಡೋಕೆ ಬರಲ್ಲ ಎಂದು ಮೊದಲೇ ಹೇಳಿದ್ದೆನಲ್ಲಾ..ಅದಕ್ಕೆ ನಾನೇ ಡಿಸೈನ್ ಬಿಡಿಸಲು ಪ್ರಯತ್ನವನ್ನೂ ಮಾಡಿದ್ದೇನೆ. ಅದೂ ನನ್ನ ಅಪ್ಪನ ಕೈಯಲ್ಲಿ. ರಾತ್ರಿ ವೇಳೆ ಅಪ್ಪ ಸುಮ್ಮನೆ ಕುಳಿತಿರುತ್ತಾರಲ್ಲಾ ಎಂಬ ಕಾರಣದಿಂದ ಅಪ್ಪನ ಕೈಯಲ್ಲಿ ಚಿತ್ತಾರ ಬಿಡಿಸುತ್ತಿದ್ದೆ. ಅದು ಕೆಟ್ಟದಾಗಿದ್ದರೂ ಅಪ್ಪ ಏನೂ ಅನ್ನುತ್ತಿರಲಿಲ್ಲ. ಅಪ್ಪನ ಮಗಳು ನಾನು, ಅದಕ್ಕೆ ಚಿಕ್ಕಂದಿನಲ್ಲಿ ಅಪ್ಪನ ಜತೆಗೇ ಮಲಗುತ್ತಿದ್ದೆ. ಮದರಂಗಿ ಕೈಗಿಟ್ಟು ಮಲಗಿದರೆ ಬೆಳಗೆದ್ದಾಗ ಅಪ್ಪನ ಮುಖ, ಎದೆಯಲ್ಲೆಲ್ಲಾ ಮದರಂಗಿ. ಕೈ ಅಲುಗಾಡಿಸದೆ ಮಲಗಬೇಕು ಎಂದು ಅಮ್ಮ ತಾಕೀತು ಮಾಡಿದ್ದರೂ, ರಾತ್ರಿ ನಿದ್ದೆಯಲ್ಲಿ ಅಪ್ಪನ ಎದೆಗೊರಗಿಯೇ ನಿದ್ದೆ ಮಾಡುವ ಬುದ್ದಿ ನನ್ನದು. ಹೀಗಿರುವಾಗ ಅಪ್ಪನಿಗೂ ಮದರಂಗಿಯ ಕೆಂಪು ತಾಗದೇ ಇರುತ್ತದೆಯೇ?
ಈಗಲೂ ನನಗೆ ಯಾವುದಾದರೂ ಹಬ್ಬ ಬಂದರೆ ಮದರಂಗಿ ಹಚ್ಚಿಕೊಂಡು ಸಿಂಗಾರ ಮಾಡಬೇಕೆಂಬ ತುಡಿತವಿರುತ್ತದೆ. ಕೆಲವೊಮ್ಮೆ ಇದು ಸಾಧ್ಯವಾಗುವುದೂ ಇಲ್ಲ. ಮೊನ್ನೆ ಹೊಸ ವರುಷಕ್ಕೆ ನನ್ನ ರೂಂಮೇಟ್ ನನ್ನ ಕೈಯಲ್ಲಿ ಮದರಂಗಿ ಡಿಸೈನ್ ಬಿಡಿಸಿದ್ಳು...ನನಗೆ ಡಿಸೈನ್ ಬರಲ್ಲ ಕಣೇ ಎಂದು ಅವಳು ಹೇಳಿದರೂ ಪರ್ವಾಗಿಲ್ಲ..ಅದೊಂದು ಹೊಸ ಡಿಸೈನ್ ಆಗಬಹುದು ಎಂದು ಎರಡೂ ಕೈಗಳಲ್ಲಿ ಡಿಸೈನ್ ಮಾಡಿಸಿದ್ದೆ. ನಿಜವಾಗಿಯೂ ಅದೊಂದು ಹೊಸ ಡಿಸೈನ್ ಆಗಿತ್ತು...ಸಾದಾ ಡಿಸೈನ್ ಎಂದು ಅನಿಸಿದರೂ ಅದರಲ್ಲಿ ಗೆಳತಿಯ ಪ್ರೀತಿಯಿತ್ತು. ಈ ಡಿಸೈನ್್ನಲ್ಲೂ ಪುಟ್ಟದಾದ ಲವ್ ಸಿಂಬಲ್್ನ್ನು ಹಾಕಲು ನಾನು ಮರೆತಿಲ್ಲ. ಇವತ್ತು ಕೈಯಲ್ಲಿನ ಮದರಂಗಿ ಮಾಸಿ ಹೋಗುತ್ತಿದ್ದುದನ್ನು ನೋಡಿ ಇದೆಲ್ಲಾ ನೆನಪಾಯ್ತು... ಚಿತ್ರ -ಸಾಂದರ್ಭಿಕ ಚಿತ್ರ
Comments
ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಬಂದೆ...
ಚೆನಾಗಿದೆ ಮದರಂಗಿ ಪುರಾಣ ..
ಹಮ್...ನಮ್ ಕಡೆ ನಾಗರ ಪಂಚಮಿಯ ದಿನ ಹೆಂಗಸರ ಜೊತೆ ಗಂಡಸರಿಗೂ ಮದರಂಗಿ ಹಚ್ಚುವ ಸಂಪ್ರದಾಯವಿದೆ...ಹಾಗಾಗಿ ಏನೋ ಅಲ್ಪ ಸ್ವಲ್ಪ ಮದರಂಗಿ ಇದೆ...ರಾತ್ರಿ ಅಮ್ಮನ ಹತ್ತಿರ ಕೈ-ಕಾಲು ಬೆರಳಿಗೆ ಮದರಂಗಿ ಹಚ್ಚಿಕೊಂಡು,ಅದಕ್ಕೆ ಬಾಳೆ ಎಲೆ ಸುತ್ತಿ ಮಲಗುತ್ತಿದ್ದೆವು ಚಿಕ್ಕಂದಿನಲ್ಲಿ...ಈಗೀಗ ನಾಗರ ಪಂಚಮಿಗೆ ಮನೆಯಲ್ಲಿರುವುದೇ ಕಡಿಮೆ..ಇದ್ದರೂ ಹಚ್ಚಿಸಿಕೊಳ್ಳುತ್ತೇನೋ ಇಲ್ಲವೋ ಗೊತ್ತಿಲ್ಲ..
ಬರೀತಾ ಇರಿ..
ನಮಸ್ತೆ
ನಮಸ್ತೆ ..ಬರಹವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು