ಕರ್ನಾಟಕ ಸರ್ಕಾರ ಯಾಕೆ 'ಥಿಂಕ್' ಮಾಡಲ್ಲ?

ರ್ನಾಟಕದಲ್ಲಿ 'ಪವರ್' ಸಮಸ್ಯೆ ಇದ್ದದ್ದೇ. (ರಾಜಕಾರಣಿಗಳ ಪವರ್ ಅಲ್ಲ !).ಒಂದು ದಿನ ನೀರು ಇದ್ದರೆ ಇನ್ನೊಂದಿನ ಪವರ್ ಇಲ್ಲ. ರಾಜ್ಯಕ್ಕೆ ವಿದ್ಯುತ್ ಸಾಕಾಗ್ತಾ ಇಲ್ಲ ಎಂಬುದು ಮಂತ್ರಿವರ್ಯರ ವರಸೆ. ಬುರುಡೆ ಬಲ್ಬ್ ಬೇಡ ಎಂದು ಸರ್ಕಾರ ಹೇಳಿದ್ದೂ ಆಯ್ತು. ಅದೂ ಬುರುಡೆ ಬಿಟ್ಟದ್ದೋ ಅಂತಾ ಗೊತ್ತಿಲ್ಲ :)
ಅಲ್ಲಾ ಮಾರಾಯ್ರೆ ... ಏನೇ ಹೇಳಿ ಬುರುಡೆ ಅಥವಾ ಇನ್ಯಾವುದೇ ಬಲ್ಬ್ ಉರಿಯಲು ವಿದ್ಯುತ್ ಬೇಕಲ್ವಾ? ವಿದ್ಯುತ್ ಇಲ್ಲದಿದ್ದರೆ ಬಲ್ಬ್ ವಿಷ್ಯ ಯಾಕೆ ಬೇಕು?
ಕರ್ನಾಟಕದಲ್ಲಿ ವಿದ್ಯುತ್್ನ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ತೀನಿ. ಆದರೆ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಯಾಕೆ ವಿಫಲವಾಗುತ್ತಿದೆ? (ರಾಜ್ಯದ ರಾಜಕೀಯ ಡೊಂಬರಾಟ ವಿದ್ಯುತ್ತಿಗೇ 'ಶಾಕ್್' ನೀಡಿದೆಯೇ ಎಂಬುದು ನನ್ನ ಅನುಮಾನ)

ಸದ್ಯ ಈ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಸೌರಶಕ್ತಿಯ ಮೊರೆ ಯಾಕೆ ಹೋಗಬಾರದು? ಇಲ್ಲಿ ಲಭ್ಯವಾಗುವಂತಹ ಸೌರಶಕ್ತಿಯನ್ನು ಸದುಪಯೋಗಿಸಿಕೊಂಡರೆ ರಾಜ್ಯಕ್ಕೆ ಬೇಕಾದಷ್ಟು ವಿದ್ಯುತ್ತನ್ನು ಪಡೆಯಬಹುದು ಎಂಬ ಯೋಚನೆ ಸರ್ಕಾರಕ್ಕೆ ಹೊಳೆದಿಲ್ಲವೇ? ಇಲ್ಲಿರುವ ಕಟ್ಟಡಗಳ ಮೇಲೆ ಸೋಲಾರ್ ಪೇನಲ್ ಹಾಕಿಸಿದ್ರೆ ಕನಿಷ್ಠ ನಿತ್ಯೋಪಯೋಗಿ ವಿದ್ಯುತ್ ಪಡೆಯಬಹುದು ಎಂಬುದರ ಬಗ್ಗೆ ಜನರು ಯಾಕೆ ಯೋಚನೆ ಮಾಡಲ್ಲ?

ಇನ್ನು ನೀರಿನ ಸಮಸ್ಯೆ, ಮಳೆ ನೀರು ಅದೆಷ್ಟು ಪೋಲಾಗುತ್ತಿದೆ? ಇಲ್ಲಿ ಯಾರು ಮಳೆ ನೀರು ಸಂಗ್ರಹದತ್ತ ಗಮನ ಕೊಡುತ್ತಿಲ್ಲ ಎಂಬುದೇ ಸತ್ಯ. ಮನೆ ಅಥವಾ ಯಾವುದೇ ಕಟ್ಟಡ ನಿರ್ಮಿಸುವಾಗ ಮಳೆ ನೀರು ಸಂಗ್ರಹ ಯೋಗ್ಯವಾಗುವಂತೆ ಟ್ಯಾಂಕ್ ನಿರ್ಮಿಸಿದರೆ ಮನೆಗೆ ಬೇಕಾದ ನೀರನ್ನು ಪಡೆಯಬಹುದು ಎಂಬ ಸಾಮಾನ್ಯಜ್ಞಾನ ಜನರಿಗೆ ಇಲ್ಲವಾಯಿತೇ?. ಮಳೆ ನೀರು ಸಂಗ್ರಹದ ಬಗ್ಗೆ ಪುಟಗಟ್ಟಲೆ ಬರೆದದನ್ನು ಓದಿ, ಅದನ್ನು ಅನುಷ್ಠಾನಕ್ಕೆ ತರಲು ಜನರು ಯಾಕೆ ಹಿಂದೇಟು ಹಾಕುತ್ತಾರೆ?

ನಮ್ಮೂರಲ್ಲಿ (ಕೇರಳದ ಕಾಸರಗೋಡು ಜಿಲ್ಲೆ) ನೀರು ಬೇಕಾದಷ್ಟು ಇದೆ, ಕಾಲಕ್ಕೆ ತಕ್ಕಂತೆ ಮಳೆಯೂ ಬರುತ್ತಿದೆ. ಆದರೂ ಜನರು ಇಂಗು ಗುಂಡಿಗಳನ್ನು ತೋಡಿ ಭೂಜಲ ಬತ್ತಿ ಹೋಗದಂತೆ ಕಾಪಾಡುತ್ತಾರೆ. ಕಟ್ಟಡಗಳಲ್ಲಿ ಮಳೆನೀರು ಸಂಗ್ರಹ ಮಾಡಲಾಗುತ್ತದೆ. ನಮ್ಮ ನೆರೆಹೊರೆಯಲ್ಲೇ ಈ ತರಹ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಇಲ್ಲಿಯವರು ಮಲ್ಟಿ ನ್ಯಾಷನಲ್ ಕಂಪೆನಿಯ ಉದ್ಯೋಗಿಗಳೋ, ಸಾಫ್ಟ್್ವೇರ್ ಇಂಜಿನಿಯರ್್ಗಳೋ ಅಲ್ಲ. ಅಬ್ಬಬ್ಬಾ ಅಂದ್ರೆ ಹತ್ತನೇ ತರಗತಿಯ ವರೆಗೆ ಓದಿದ ಸಾಮಾನ್ಯ ಕೂಲಿ ಕಾರ್ಮಿಕರು. ಇವರ ಮನೆಯಲ್ಲಿ ಮಳೆನೀರು ಸಂಗ್ರಹ ಟ್ಯಾಂಕ್್ಗಳಿವೆ, ಸೌರಶಕ್ತಿಯಿಂದ ವಿದ್ಯುತ್ ಪಡೆಯಲಾಗುತ್ತದೆ.

ನಮ್ಮ ನೆರೆ ರಾಜ್ಯಗಳನ್ನೇ ನೋಡಿ...ಕೇರಳ ಮತ್ತು ತಮಿಳುನಾಡಿನಲ್ಲಿ ಮಳೆನೀರು ಸಂಗ್ರಹಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇದೀಗ ಚೆನ್ನೈಯಲ್ಲಿ ಮಳೆ ನೀರು ಸಂಗ್ರಹ ಮಾಡುವ ಕಟ್ಟಡಗಳು ಸಾಕಷ್ಟು ಇವೆ. ಆದರೆ ಕರ್ನಾಟಕ ಇಂಥಹ ವ್ಯವಸ್ಥೆಗಳಿಗೆ ಕೈ ಹಾಕುವುದಿಲ್ಲ ಯಾಕೆ? ಎಂಬುದು ನನ್ನ ಪ್ರಶ್ನೆ.

ಅದೇ ವೇಳೆ ಗುಜರಾತ್್ನಲ್ಲಿ ಮೋದಿ ಸರ್ಕಾರ ಸಾಗರದ ಅಲೆಯಿಂದ ವಿದ್ಯುತ್ ಉತ್ಪಾದಿಸಲು ಹೊರಟು ನಿಂತಿದೆ. ಇಂಥಹ ವಿಚಾರಗಳು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಯಾಕೆ ಹೊಳೆಯುವುದಿಲ್ಲ? ಇಲ್ಲಿನ ಜನತೆಯೇ ಉತ್ತರಿಸಬೇಕಾಗಿದೆ.

Comments

Govinda Nelyaru said…
ಸೌರ ಶಕ್ತಿ ಬಳಕೆ ಬಗೆಗೆ ನಿಮ್ಮ ಕಾಳಜಿ ಇಷ್ಟವಾಯಿತು. ಆದರೆ ಅದರ ಉಪಯೋಗ ಅಷ್ಟು ಸರಳವಲ್ಲ. ನಮ್ಮ ಮನೆ ಮೇಲೆ ಉತ್ಪಾದನೆಯಾಗುವ ಸೌರ ವಿದ್ಯುತ್ ಜಾಲಕ್ಕೆ ಹಾಯಿಸಬೇಕಾದರೆ ಆಗ ಜಾಲದಲ್ಲಿ ವಿದ್ಯುತ್ ಇರಲೇ ಬೇಕಾಗುತ್ತದೆ. ಮದ್ಯೆದಲ್ಲಿ ಒಂದು ವಿಶಿಷ್ಟವಾದ ಇನ್ವರ್ಟರ್ ಬೇಕು. ಆ ಇನ್ವರ್ಟರ್ ಜಾಲದ cycle / voltage ಬಗೆಗೆ ಗಮನಿಸಬೇಕು. ಅನಂತರ ಹಾಯಿಸಲು ಅನುಕೂಲವಾಗುವಂತೆ cycle ಗೆ ಸಮಾನಂತರವಾಗಿ ಅದಕ್ಕಿಂತ ಹೆಚ್ಚಿನ voltage ನಲ್ಲಿ ವಿದ್ಯುತ್ ಪರಿವರ್ತಿಸಬೇಕು.

ಈ ರೀತಿಯ ದುಬಾರಿ ಇನ್ವರ್ಟರ್ ನಮ್ಮ ದೇಶದಲ್ಲಿ ತಯಾರಾಗುವುದಿಲ್ಲ.
ನಮ್ಮ ಮನೆ ಸರಿಗೆಯಲ್ಲಿ ಬಿಸಿಲಿರುವ ದಿನಗಳೆಲ್ಲ ವಿದ್ಯುತ್ ಇರುವ ಕಾತರಿಯಿಲ್ಲ.
ಜನಸಾಮಾನ್ಯರಿಂದ ಚಿಲ್ಲರೆ ವಿದ್ಯುತ್ ಖರೀದಿಸಲು ನಮ್ಮ ದೇಶ ಜರ್ಮನಿಯಲ್ಲ.

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ