ಯುರೇಕಾ...ಯುರೇಕಾ

ನೋಡು..ಮಗು ಅಲ್ಲಿದೆ ಅಜ್ಜಿಮನೆ
ಇನ್ನೊಂದು ಹೆಜ್ಜೆ ಅಷ್ಟೇ..
ಈಗ ನಡೆದದ್ದು 2 ಮೈಲಿಯಷ್ಟಾಗಿತ್ತು
ಇನ್ನೂ ಸ್ವಲ್ಪ ದೂರ..
ಅಪ್ಪ ಮಗನನ್ನು ಪುಸಲಾಯಿಸಿ
ಹೆಜ್ಜೆ ಹಾಕುತ್ತಿದ್ದ ಅಪ್ಪ....

ವರುಷ ಸರಿದಾಗ ಮನೆಯ ಮುಂದಿನ
ಡಾಂಬರು ರೋಡಿನಲ್ಲಿ ಮಗ ಓಡಾಡಿದ
ಮಗು ಓಡು, ಇನ್ನೂ ಜೋರಾಗಿ ಓಡು
ಅಪ್ಪ ಹುರಿದುಂಬಿಸಿದ
ಮಗ ಓಡುತ್ತಲೇ ಇದ್ದ

ಇದು ಮ್ಯಾರಥಾನ್ ಅಲ್ಲ, ಕ್ರಾಸ್್ಕಂಟ್ರಿ ರೇಸ್ ಅಲ್ಲ...
ಬದುಕ ಬಂಡಿಯನ್ನೆಳೆಯಲು ಅವ ಓಡುತ್ತಿದ್ದ
ಮುದ್ದು ಗಲ್ಲದಲ್ಲಿ ಕಾಣಿಸಿತ್ತು ಗಡ್ಡ
ಹೆಗಲ ಮೇಲಿತ್ತು ಕನಸುಗಳ ಭಾರ

ಓಡು ಮಗು ಓಡು ಇನ್ನೂ ಓಡಬೇಕೆಂದ
ಮುದಿ ಕೂದಲಿನ ಅಪ್ಪ...
ಗಮ್ಯ ಸ್ಥಾನವೆಲ್ಲೋ ಯಾರಿಗೇನು ಗೊತ್ತು?

ನಿನ್ನ ಮುಂದಿರುವ ಜನರ ಕಾಲೆಳೆದು ಹೊರದಬ್ಬು
ಹಿಂದಿರುವ ಮಂದಿಯನ್ನು ಒದೆಕೊಟ್ಟು ತಳ್ಳು
ಇಷ್ಟು ಸಾಕಾಗದಿದ್ದರೆ ಅವರ ಮನ ಚಿವುಟು
ಅವರ ಕಣ್ಣೀರಲಿ ತೇಲುತ್ತಾ ನೀ ದಡವ ಸೇರು

ಮಗ ಓಡುತ್ತಲೇ ಇದ್ದ ಪಿತೃ ವಾಕ್ಯ ಪಾಲಕನಂತೆ
ಲಜ್ಜೆ ಬಿಡು ನೀನು...ಎಲ್ಲರಿಂದ ಮುಂದೆ ಸಾಗು
ಕಿವಿ ಕೇಳಿಸದು, ಕಣ್ಣು ಕಾಣಿಸದು...
ಲಜ್ಜೆ ಬಿಟ್ಟು ವಿವಸ್ತ್ರನಾಗಿ ಮಗ ಓಡುತ್ತಿದ್ದ
ಜನ ನಕ್ಕಾಗ ಅಪ್ಪ ಹೇಳಿದ
ಯುರೇಕಾ....ಯುರೇಕಾ...

Comments

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ