ನಮ್ಮೂರ ಗೋರ್ಮೆಂಟು ಬಾವಿ

"ರಿಗೊಬ್ಬಳೇ ಪದ್ಮಾವತಿ" ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ. ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ...ಎಲ್ಲರೂ ಅದನ್ನು ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು. ಊರ ಮಧ್ಯೆ ಸಿಮೆಂಟು ಕಟ್ಟೆಯ ಈ ಬಾವಿಯ ಪಕ್ಕವೇ ಸಿಮೆಂಟಿನ ಒಂದು ಸಣ್ಣ ಟ್ಯಾಂಕ್ ಕೂಡ ಇದೆ. ನೀರು ಸೇದೋಕೆ ಬಂದೋರು ಯಾರಾದ್ರೂ ಆ ಟ್ಯಾಂಕ್್ಗೆ ಒಂದು ಕೊಡ ನೀರು ಹಾಕಿ ಬಿಟ್ಟರೆ ಅಲ್ಲಿರುವ ಪ್ರಾಣಿ ಪಕ್ಷಿಗಳ ದಾಹವೂ ಇಂಗುತ್ತದೆ. ಗೋರ್ಮೆಂಟು ಬಾವಿ ಅಂದರೆ ಇನ್ನು ಹೇಳಬೇಕೆ? ಸ್ವಂತ ಮನೆ ಕಟ್ಟಿ ಬಾವಿ ತೋಡುವವರೆಗೂ, ಮನೆಯ ಬಾವಿಯಲ್ಲಿ ನೀರು ಬತ್ತಿದಾಗಲೂ ನೆನಪಾಗುವುದೇ ಈ ಬಾವಿ. ಈವಾಗ ಮನೆಗೊಂದು ಬೋರ್್ವೆಲ್ ಜತೆಗೆ ಪಂಚಾಯತ್ ವತಿಯಿಂದ ಮನೆ ಮನೆಗೆ ನೀರು ಸೌಕರ್ಯವಿರುವುದರಿಂದ ಬಾಡಿಗೆ ಮನೆಯಲ್ಲಿ ವಾಸವಿರುವವರೇ ಈ ಬಾವಿಯ ಗಿರಾಕಿಗಳು.

ಬೆಳಗ್ಗೆ ಬೆಳಕು ಮೂಡುತ್ತಲೇ ನೀರೆಯರು ಬಾವಿಯತ್ತ ಧಾವಿಸುತ್ತಾರೆ. ಚಾ ಆಯ್ತಾ? ತಿಂಡಿ ಏನು? ಎಂಬ ಒನ್ ಲೈನ್ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಿ ನೀರು ಸೇದಿ ಗಡಿಬಿಡಿಯಲ್ಲಿ ನೀರು ಕೊಂಡೊಯ್ಯುವುದು ಬೆಳಗ್ಗಿನ ವಿಶೇಷ . ಮಧ್ಯಾಹ್ನದ ವೇಳೆಗೆ ಬಾವಿಕಟ್ಟೆಯ ಸುತ್ತಲೂ ತಟ ಪಟ ಅಂತಾ ಬಟ್ಟೆ ಒಗೆಯುವವರೇ ಜಾಸ್ತಿ. ಅಲ್ಲೇ ಬಟ್ಟೆ ಒಗೆದು ಪಕ್ಕದಲ್ಲಿರುವ ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿಯೋ, ಇಲ್ಲದಿದ್ದರೆ ಅಲ್ಲೇ ಪಾರೆಕಲ್ಲಿನ ಮೇಲೆ ಬಟ್ಟೆ ಒಣಗಿಸಿ ಮನೆಗೆ ಮರಳುವವರೇ ಜಾಸ್ತಿ .

ಸಂಜೆ ವೇಳೆಗೆ ನೋಡ್ಬೇಕಪ್ಪಾ...ನೀರು ಸೇದಲು ನೀರೆಯರ ಕ್ಯೂ... ಜತೆಗೆ ಅಲ್ಲಿ ಒಂದೆರಡು ಗಂಡಸರು ಇದ್ದೇ ಇರುತ್ತಾರೆ. ಅದರಲ್ಲೂ ಮದುವೆಯಾದ ಹೊಸತರಲ್ಲಿ ತನ್ನ ಹೆಂಡತಿಗೆ ನೀರು ತರಲು ಸಹಾಯ ಮಾಡುವ ಗಂಡನ ಗಮ್ಮತ್ತೇ ಬೇರೆಯಿರುತ್ತೆ. ಪಾಪ...ಆ ಹುಡುಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತಾನಲ್ವಾ? ಎಂದು ಒಂದೆರಡು ಹೆಂಗಸರ ಬಾಯಿಯಿಂದ ಕೇಳುವವರೆಗೆ ಆ 'ಗಂಡ' ನೀರು ಸೇದಿದ್ದೇ ಸೇದಿದ್ದು. ಅವ ನೀರು ತೆಗೆದು ಕೊಂಡು ಹೋಗುವ ಸ್ಟೈಲ್ ಬೇರೆ ಇರುತ್ತೆ.

ಇತ್ತ, ತಲೆಯಲ್ಲೊಂದು ಪಾತ್ರೆ, ಸೊಂಟದಲ್ಲೊಂದು ಕೊಡ ಸಿಕ್ಕಿಸಿ ನಡೆಯುವಾಗ ಒದ್ದೆ ಲಂಗ ಕಾಲೆಡೆಯಲ್ಲಿ ಸಿಕ್ಕಿ ಬ್ಯಾಲೆನ್ಸ್ ಮಾಡುವ ಅಮ್ಮಂದಿರು...ನೈಟಿ ಹಾಕಿದ ಆಂಟಿಯರು, ಚೂಡಿದಾರದ ಹುಡ್ಗೀರು ಎಲ್ಲರೂ ಉಸ್ಸಪ್ಪಾ...ಎಂದು ನೀರು ಸೇದುತ್ತಿರುವುದು ಸಾಮಾನ್ಯ ದೃಶ್ಯ. ಸಂಜೆ ನಾಲ್ಕು ಗಂಟೆ ಆಯ್ತು ಎಂದರೆ ಇಲ್ಲಿ ಗೌಜಿಯೋ ಗೌಜಿ. ಸಂಜೆ ಕಾಫಿ ಆಯ್ತಾ? ರಾತ್ರಿ ಊಟಕ್ಕೆ ಮೀನು ಸಿಕ್ಕಿದೆಯಾ? ಎಂಬೆಲ್ಲಾ ಪ್ರಶ್ನೆಗಳಿಂದ ಆರಂಭವಾಗಿ ಮೀನು ಮಾರುವ ಮೊಮ್ಮದ್ ಇಂದು ಬಂದಿಲ್ಲ ಯಾಕೆ? ಕಂತಿಗೆ ಬಟ್ಟೆ ಕೊಡುವ ಅಣ್ಣಾಚಿಯಿಂದ ಖರೀದಿಸಿದ ಹೊಸ ಸೀರೆ, ಧಾರವಾಹಿ, ಸಿನೆಮಾಗಳೂ ಇಲ್ಲಿ ಚರ್ಚೆಯಾಗುವುದುಂಟು.

ಇನ್ನು ಕೆಲವೊಮ್ಮೆ ಯಾವುದೋ ಮನೆಯ ಸಂಭ್ರಮದ ಬಗ್ಗೆ, ಕಳೆದ ರಾತ್ರಿ ಪಕ್ಕದ ಮನೆಯಲ್ಲಿ ಕೇಳಿಬಂದ ಬೆಕ್ಕಿನ ಸದ್ದಿನ ಬಗ್ಗೆ, ಯಾವುದೊ ಮುರಿದ ಸಂಬಂಧಗಳು, ಹೊಸ ಸಂಬಂಧಗಳು, ಓಡಿ ಹೋದವರ ಕಥೆ ಎಲ್ಲವೂ ಮಸಾಲೆ ಮಿಶ್ರಿತವಾಗಿ ಅವರಿವರ ಬಾಯಲ್ಲಿ ಸೇರಿ ಮೆಗಾ ಧಾರವಾಹಿಗಳಾಗಿ ಬಿಡುತ್ತವೆ.. ಕೆಲವರಂತೂ ಈ ಗಾಸಿಪ್್ಗಳನ್ನು ಕೇ(ಹೇ)ಳುವ ಸಲುವಾಗಿಯೇ ನೀರಿಗೆ ಬಂದಿರುತ್ತಾರೆ. ಅಮ್ಮನ ಜತೆ ಬಂದ ಮಗಳನ್ನು ಕಣ್ಣಲ್ಲೇ ಅಳೆದು ನೋಡಿ 'ದೊಡ್ಡವಳಾಗಿದ್ದಾಳಾ?' ಎಂದು ಕೇಳುವುದು ಮಾಮೂಲಿ. ಅಮ್ಮ ಹೇಳುತ್ತಿರುತ್ತಾರೆ, ಮೊದಲೆಲ್ಲಾ ಮೈಲಿಗೆಯಾದ ಹೆಂಗಸರು ಆ ನೀರು ಮುಟ್ಟವಂತಿರಲಿಲ್ಲವಂತೆ. ಆದ್ರೆ ಈವಾಗ ಮಡಿ ಮೈಲಿಗೆ ಅಂತಾ ಯಾರೂ ಹೇಳಿಕೊಳ್ಳೋದಕ್ಕೆ ಹೋಗಲ್ಲ...ಯಾರಿಗೂ ಈ ಬಗ್ಗೆ ತಕರಾರು ಇಲ್ಲ.

ಅದಿರಲಿ ಬಿಡಿ, ಊರಿಗೆ ಬಂದವಳು ನೀರಿಗೆ ಬಾರದಿರುವಳೇ? ಎಂಬಂತೆ ಮದುವೆಯಾಗಿ ಹೊಸ ಹೆಣ್ಣೊಂದು ಊರಿಗೆ ಬಂದರೆ ಬಾವಿ ಕಟ್ಟೆ ಬಳಿಯೇ ಅವಳ ಬಯೋಡಾಟಾ ಕೇಳಲಾಗುತ್ತದೆ. ಈ ಹುಡುಗಿಯಂತೂ ಎಲ್ಲರ ಪ್ರಶ್ನೆಗೆ ಉತ್ತರಿಸಲೇ ಬೇಕು. ಇಲ್ಲದಿದ್ದರೆ ಅವಳ ಅತ್ತೆಯಲ್ಲಿ ನಿಮ್ಮ ಸೊಸೆಗೆ ಅದೆಷ್ಟು ಸೊಕ್ಕು ಎಂದು ಯಾರಾದ್ರೂ ಹೇಳಿ ಬಿಟ್ಟರೆ!. ಅತ್ತೆಯ ಬಗೆಗಿನ ಗುಟ್ಟುಗಳನ್ನು ರಟ್ಟು ಮಾಡಲು ಸೊಸೆಯನ್ನೇ ಏಜೆಂಟ್ ಆಗಿ ಇಟ್ಟು ಕೊಳ್ಳುವ 'ಅತ್ತೆ ವಿರೋಧಿ' ಪಕ್ಷದವರೂ ಸುಮ್ಮನಿರುತ್ತಾರೆಯೇ?

ನೀರಿಗೆ ಬರುವ ನೀರೆಯರ ವಿಷಯಗಳ ಜತೆಗೆ ಗಂಡಸರ ವಿಷಯ ಹೇಳದಿದ್ದರೆ ಹೇಗಪ್ಪಾ? ಕೂಲಿ ಮಾಡುವ ಗಂಡಸರೇ ಜಾಸ್ತಿ ಇರುವ ಈ ಊರಲ್ಲಿ ಸಂಜೆ ವೇಳೆಗೆ ಮಾತ್ರ ಗಂಡಸರು ನೀರಿಗಾಗಿ, ಸ್ನಾನಕ್ಕಾಗಿ ಬಂದಿರುತ್ತಾರೆ. ಬಾವಿ ಕಟ್ಟೆಯ ಪಕ್ಕದಲ್ಲೇ ಪರಿಮಳಭರಿತವಾದ ಸೋಪುಗಳಿಂದ ನೊರೆ ಬರಿಸಿ, ಕೊಡಪಾನದಲ್ಲಿನ ನೀರನ್ನು 'ಧೋ' ಎಂದು ಸುರಿದು ಸ್ನಾನ ಮಾಡುವ ಜವ್ವನಿಗರೇ ಜಾಸ್ತಿ. ಬಾವಿಕಟ್ಟೆಯ ಮೇಲೇ ಸೋಪು ಇರಿಸಿ ಅದು ಜಾರಿ (ಕೆಲವೊಮ್ಮೆ ಒಳಚಡ್ಡಿ) ಬಾವಿಗೆ ಬಿದ್ದದ್ದೂ ಉಂಟು. ಆದ್ರೂ ಅವರ ಸ್ನಾನಕ್ಕಾಗಲೀ, ಬಾವಿ ನೀರಿಗಾಗಲಿ ಯಾವುದೇ ಧಕ್ಕೆ ಉಂಟಾಗಿಲ್ಲ. ಸುಮಾರು 26 ಅಡಿಯಿರುವ ಈ ಬಾವಿಯ ತಳದಲ್ಲಿ ಅದೆಷ್ಟು ಕೊಡಪಾನಗಳು, ಚಡ್ಡಿಗಳು, ಸೋಪುಗಳು ಬಿದ್ದು ಮೀನು ಕಪ್ಪೆಯ ಜತೆಗೆ ಗುದ್ದಾಟ ನಡೆಸುತ್ತಿವೆಯೋ ಎಂಬುದನ್ನು ದೇವರೇ ಬಲ್ಲ!.

ಇರಲಿ, ಇಷ್ಟೊಂದು ಎಂಟರ್್ಟೈನ್್ಮೆಂಟ್ ಜತೆಗೆ ಫೈಟಿಂಗ್ ಇರದಿದ್ದರೆ ಬೋರ್ ಅನಿಸಲ್ವಾ? ಅದೂ ಇರುತ್ತೆ ಕಣ್ರೀ..ನಮಗೆ ಆಗದವರು (ಕುಟುಂಬದ ಜತೆ ಕೋಪ ಇದ್ದವರು) ನಮ್ಮ ಹಗ್ಗ ಮುಟ್ಟಿದರೆ ಇಲ್ಲಿ ಜಗಳ ಗ್ಯಾರೆಂಟಿ. ಇನ್ನು ನನ್ನ ಮಗಳನ್ನು ನಿನ್ನ ಮಗ ನೋಡಿದ, ನಿನ್ನ ಮಗಳು ಅವನತ್ತ ನೋಡ್ತಾನೆ ಇದ್ಳು, ಮಕ್ಕಳ ಜಗಳ, ಅವರಿವರ ಚಾಡಿ ಮಾತು ಕೇಳಿ ರಂಪಾಟ ಮಾಡಿ 'ಧುಮ್ಮಿಕ್ಕುವ ನೀರೆ'ಯರೂ ಈ ಬಾವಿಕಟ್ಟೆಯನ್ನೇ ರಣರಂಗವಾಗಿಸಿದ್ದೂ ಇದೆ. ಅದ್ರೂ ಕುಡಿಯೋಕೆ ನೀರಿಲ್ಲದಿದ್ದರೆ ಹೇಗೆ? ಮತ್ತೆ ಅದೇ ಬಾವಿ... ಅದೇ ನೀರು... ಅವರಿಗೆ ಆಸರೆಯಾಗುತ್ತೆ. ಅಲ್ಲಿಗೆ ಬರುವ ಜನರು ಪರಸ್ಪರ ಕಚ್ಚಾದಿದ್ದರೂ ಎಲ್ಲರೂ ಕುಡಿಯುವ ನೀರೊಂದೇ ಎಂಬಂತೆ ಸಾಮರಸ್ಯ ಹಾಡುವ ನಮ್ಮೂರ ಗೋರ್ಮೆಂಟ್ ಬಾವಿ ಈವರೆಗೆ ಬತ್ತಿ ಹೋಗಿಲ್ಲ ಎಂಬುದೇ ನಮ್ಮ ಪಾಲಿಗೆ ಸಮಾಧಾನಕರ ಸಂಗತಿ.

Comments

Rocky said…
nimma lekhana tumba chanagide..rashmi..
oduta idre tumba kushi agutte
Rocky said…
nimma lekhana tumba chanagide..rashmi..
oduta idre tumba kushi agutte
@Rocky

thank you so much

-rashmi

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ