"ಕರ್ನಾಟಕ ಚೆಕ್ ಪೋಸ್ಟ್ ಗಳಲ್ಲಿ ಮಾಮೂಲುದಾರರು"- ನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ

ಚೆಕ್ ಪೋಸ್ಟ್ ಗಳಲ್ಲಿ ಕತ೯ವ್ಯ ನಿರತರಾಗಿರುವ ಪೊಲೀಸರು ಲಂಚ ಕೇಳುವುದು ಹೊಸತೇನಲ್ಲ. ಅವರಿಗೆ 'ಮಾಮೂಲು' ಕೊಟ್ಟು ರಾಜ್ಯದ ಗಡಿ ದಾಟಿ ಬರುವ ಪ್ರತಿಯೊಬ್ಬ ಪ್ರಯಾಣಿಕನು ಪೊಲೀಸರಿಗೆ ಹಿಡಿಶಾಪ ಹಾಕುತ್ತಾನೆಯೇ ಹೊರತು ಯಾರೂ ಈ ಬಗ್ಗೆ ಕೇಸು ದಾಖಲಿಸುವುದಿಲ್ಲ ಎಂಬುದು ದುರದೃಷ್ಟಕರ. ಕೇರಳ-ಕನಾ೯ಟಕ ಗಡಿ ಪ್ರದೇಶದಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ಬಗ್ಗೆ ಮಲಯಾಳ ಮನೋರಮಾ ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಗಿದೆ. ಈ ಸುದ್ದಿ ಕನಾ೯ಟಕದ ಜನತೆಗೂ ತಲುಪಲಿ ಎಂಬ ಆಶಯದೊಂದಿಗೆ ಈ ಬ್ಲಾಗ್ ಬರೆಯುತ್ತಿದ್ದೇನೆ.


ಕೇರಳ ಕನಾ೯ಟಕ ಗಡಿಪ್ರದೇಶವಾದ ಗುಂಡ್ಲುಪೇಟೆಯಲ್ಲಿ ರಂಜಿತ್ ನಿದೇ೯ಶನದ 'ಇಂಡಿಯನ್ ರುಪೀ' ಎಂಬ ಮಲಯಾಳಂ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಗಡಿಪ್ರದೇಶದಲ್ಲಿ ಕನಾ೯ಟಕ ಪೊಲೀಸರು ಲಂಚಕ್ಕಾಗಿ ತಮ್ಮನ್ನು ಪೀಡಿಸಿದ ಘಟನೆಯ ಬಗ್ಗೆ ಮಲಯಾಳಂ ಚಿತ್ರನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ.

"ರಾಜ್ಯದ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಮತ್ತು ಪೊಲೀಸ್ ಏಯ್ಡ್ ಪೋಸ್ಟ್ ಗಳಿರುವುದೇ ಪ್ರಯಾಣಿಕರ ಹಾಗೂ ಸರಕು ಸಾಗಾಟಗಾರರ ಭದ್ರತೆಗಾಗಿ. ಇವರಿಗೆ ಜನರಿಂದ 'ಮಾಮೂಲು' ವಸೂಲು ಮಾಡುವ ಅಧಿಕಾರವಿರುವುದಿಲ್ಲ. ಆದರೆ, ಬತ್ತೇರಿಯಿಂದ ಗುಂಡ್ಲುಪೇಟೆಗೆ ತಲುಪಲು ನಮ್ಮ ಸಿನಿಮಾ ಟ್ರೂಪ್ ಗೆ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಪ್ರತಿ ದಿನ ನೀಡಬೇಕಾಗಿ ಬಂದ ಹಣ 200 ರು. ಪ್ರತಿ ಪ್ರಯಾಣದ ನಡುವೆ 'ಹಣ' ನೀಡಲೇ ಬೇಕಾಗಿ ಬಂದ ಪರಿಸ್ಥಿತಿ ನಮ್ಮದಾದರೆ ಇಲ್ಲಿ 'ಅವರನ್ನು' ಕೇಳುವವರೇ ಇಲ್ಲ!

ಬತ್ತೇರಿಯಿಂದ ಒಂದೂವರೆ ಗಂಟೆ ಪ್ರಯಾಣಿಸಿದರೆ ಗುಂಡ್ಲುಪೇಟೆಗೆ ತಲುಪಬಹುದು. ಗಡಿ ಪ್ರದೇಶದಲ್ಲಿ ಮೊದಲು ಸಿಗುವುದೇ ಕೇರಳ ಚೆಕ್ ಪೋಸ್ಟ್. ನಂತರ ಆರ್ ಟಿ ಓ ಚೆಕ್ ಪೋಸ್ಟ್. ಇದಾದ ನಂತರ ಸಿಗುವ ಕನಾ೯ಟಕ ಚೆಕ್ ಪೋಸ್ಟ್ ದಾಟಬೇಕಾದರೆ 'ಮಾಮೂಲು' ನೀಡಲೇಬೇಕು.

ಲೊಕೇಶನ್ ನಿಂದ ಕಾರಿನಲ್ಲಿ ಮರಳುತ್ತಿದ್ದರೆ ನನ್ನಲ್ಲಿ ಅವರು ಹಣ ಕೇಳಲಿಲ್ಲ. ಆದರೆ ಇನ್ನಿತರ ವಾಹನ ಚಾಲಕರಲ್ಲಿ ಅವರು ದುಡ್ಡು ಇಸ್ಕೊಂಡಿದ್ದನ್ನು ನಾನು ನೋಡಿದ್ದೇನೆ. ಒಂದು ದಿನ ನಾವು ಹಣ ನೀಡಲು ನಿರಾಕರಿಸಿದಾಗ ಶೂಟಿಂಗ್ ಗಾಗಿ ನಾವು ಒಯ್ಯುತ್ತಿದ್ದ ಪೊಲೀಸ್ ಯುನಿಫಾಮ್೯, ಲಾಠಿ, ಟೋಪಿ ಎಲ್ಲವನ್ನೂ ತೆಗೆದುಕೊಂಡು ಹೋದರು. ಹಣ ಕೊಟ್ಟ ನಂತರವೇ ಅವರು ನಮಗದನ್ನು ಹಿಂತಿರುಗಿಸಿದ್ದು.

ಈ ರೀತಿ ಮಾಮೂಲು ಕೇಳುವ ಕನಾ೯ಟಕ ಪೊಲೀಸರ 'ಧನದಾಹ'ಕ್ಕೆ ಬಲಿಯುವಾಗುವವರಲ್ಲಿ ಕೇರಳಿಗರೇ ಹೆಚ್ಚು. ಇವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದು ತಿಳಿಯದಾಗಿದೆ.

ಈ ಬಗ್ಗೆ ಕೇರಳ ಮತ್ತು ಕನಾ೯ಟಕ ಸಕಾ೯ರಗಳು ಜಂಟಿಯಾಗಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವೇ, ಕೇರಳ ಸಕಾ೯ರ ಇದನ್ನು ಕನಾ೯ಟಕ ಸಕಾ೯ರದ ಗಮನಕ್ಕೆ ತರಬೇಕು. ದೆಹಲಿಯಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿರುವಾಗ ನಮ್ಮ ಸಿನಿಮಾ ಟ್ರೂಪ್ 'ಮಾಮೂಲು' ನೀಡಿ ಗಡಿ ದಾಟುತ್ತಿರುವುದು ಖೇದಕರ.

ಪ್ರಿಯ ಓದುಗ, ಇದಿಷ್ಟು ಪೃಥ್ವಿರಾಜ್ ರ ಅನುಭವದ ಮಾತುಗಳು.
ಇದೇ ರೀತಿ ನೀವೂ ರಾಜ್ಯದ ಗಡಿ ದಾಟುವಾಗ ಚೆಕ್ ಪೋಸ್ಟ್ ಗಳಲ್ಲಿ 'ಮಾಮೂಲು' ಕೊಟ್ಟಿರುತ್ತೀರಿ ಅಲ್ಲವೇ? ನಿಮಗೂ ಈ ರೀತಿಯ ಅನುಭವವಾಗಿದ್ದಲ್ಲಿ ದಯವಿಟ್ಟು ಈ ಅನ್ಯಾಯದ ಬಗ್ಗೆ ದನಿಯೆತ್ತಿ. ಈ ಮೂಲಕ ಭ್ರಷ್ಟಾಚಾರದಿಂದ ದೇಶವನ್ನು ಮುಕ್ತಗೊಳಿಸಲು ನೀವೂ ಸಹಕರಿಸಿ.


ಗುಂಡ್ಲುಪೇಟೆಯಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ದೃಶ್ಯವನ್ನು ಸಿನಿಮಾ ಟ್ರೂಪ್ ಸೆರೆಹಿಡಿದಿದೆ. ಈ ಸುದ್ದಿ ಕನಾ೯ಟಕ ಸಕಾ೯ರದ ಗಮನಕ್ಕೆ ಬರಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಆಶಿಸೋಣ.

ಕೃಪೆ : ಮನೋರಮಾ ಆನ್ಲೈನ್

Comments

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ