ಮಗಳು ಫೋನ್ ಮಾಡಿದ್ಳು...ಇವತ್ತು ಅಪ್ಪಂದಿರ ದಿನ ಅಂತೆ


ಹಲೋ ಪಪ್ಪಾ....ಇವತ್ತು ಅಪ್ಪಂದಿರ ದಿನ...ಹ್ಯಾಪಿ ಫಾದರ್ರ್ಸ್ ಡೇ"

ಹೌದೇನಮ್ಮಾ...ಥ್ಯಾಂಕ್ಯೂ...ಅಂತೂ ಅಪ್ಪನಿಗೂ ಒಂದು ದಿನ ಇದೆಯಲ್ಲಾ ಎಂದು ಹೇಳಿದೆ.

ಹೇಗಿದ್ದೀರಾ ಪಪ್ಪಾ? ಎಂದು ಕೇಳಿ, ಪಪ್ಪಾ... ಅಮ್ಮನಿಗೆ ಫೋನ್ ಕೊಡು ಎಂದು ಅಂದ್ಳು...

ಅಷ್ಟೊತ್ತಿಗೆ ನನ್ನಾಕೆ ನನ್ನ ಬಳಿ ಬಂದು ನಿಂತಿದ್ದಳು. ಫೋನ್ ಆಕೆಯ ಕೈಗಿತ್ತು ನಾನು ಟೀವಿ ಮುಂದೆ ಕೂತೆ. ಅಮ್ಮ ಮಗಳು ಸುಮಾರು ಅರ್ಧ ಗಂಟೆಯವರೆಗೆ ಹರಟುತ್ತಲೇ ಇದ್ದರು.

ಹೌದು, ನನ್ನ ಪುಟ್ಟಿ ಚಿಕ್ಕವಳಿರುವಾಗ ಅವಳಿಗೆ ಎಲ್ಲವೂ ನಾನೇ ಆಗಿದ್ದೆ. ನನ್ನನ್ನು ಬಿಟ್ಟು ಆಕೆ ಎಲ್ಲಿಯೂ ಹೋಗಲ್ಲ. ಪಪ್ಪಾ..ಪಪ್ಪಾ ಎನ್ನುತ್ತಾ ನನ್ನ ಕಿರು ಬೆರಳು ಹಿಡಿದು ನಡೆದ ಮಗಳು ಈಗ ದೊಡ್ಡವಳಾಗಿದ್ದಾಳೆ. ಹೆಣ್ಮಕ್ಕಳು ಎಷ್ಟು ಬೇಗ ಬೆಳೆದು ಬಿಡ್ತಾರೆ ಅಲ್ವಾ? ನನ್ನ ಚಪ್ಪಲಿಯೊಳಗೆ ಅವಳ ಪುಟ್ಟ ಪಾದಗಳನ್ನು ತುರುಕಿ ಹೆಜ್ಜೆಯಿಡುತ್ತಾ, ನನ್ನ ಶರ್ಟ್ ಹಾಕಿ ದೊಗಳೆ ಶರ್ಟ್್ನೊಳಗೆ ನಿಂತು "ನೋಡು ಪಪ್ಪಾ ನಿಮ್ಮ ತರಾನೇ ಕಾಣ್ತಾ ಇಲ್ವಾ?" ಎಂದು ಕೇಳುತ್ತಿದ್ದ ಮಗಳು....ನಿದ್ದೆ ಮಾಡುವಾಗಲೂ ಅಷ್ಟೇ...ನನ್ನ ಪಕ್ಕದಲ್ಲೇ ಮಲಗಿ ಒಮ್ಮೊಮ್ಮೆ ನನ್ನ ಹೊಟ್ಟೆ ಮೇಲೆ ಮಲಗಿ ಉಚ್ಚೆ ಹೊಯ್ದು ಒದ್ದೆಯಾಗಿಸುತ್ತಿದ್ದ ನನ್ನ ಪುಟ್ಟಿಗೆ ಈಗ ಮದುವೆ ವಯಸ್ಸು.

ಚಿಕ್ಕವಳಿದ್ದಾಗ ಅವಳು ಕೇಳಿದ್ದನ್ನೆಲ್ಲಾ ನಾನು ಕೊಡಿಸುತ್ತಿದ್ದೆ. ಹಾಗಂತ ಅವಳು ಪಪ್ಪಾ...ನನಗೆ ಅದು ಕೊಡಿಸು, ಇದು ಕೊಡಿಸು ಎಂದು ಹಠ ಹಿಡಿದವಳೇ ಅಲ್ಲ. ಪಪ್ಪ ತಂದ ಅಂಗಿ ನನಗೆ ತುಂಬಾ ಇಷ್ಟ ಎನ್ನುತ್ತಾ ನಾನು ಏನೇ ತಂದುಕೊಟ್ಟರೂ ಖುಷಿ ಖುಷಿಯಾಗಿ ಸ್ವೀಕರಿಸುವ ಹೆಣ್ಣು ಮಗು ಅದು. ನನಗೆ ಈಗಲೂ ನೆನಪಿದೆ, ಸುಮಾರು 20 ವರ್ಷಗಳ ಹಿಂದೆ...ಅವಳಿಗಾಗ 6 ವರ್ಷ. ಪೇಟೆಗೆ ಹೋದಾಗ ಪಪ್ಪಾ ನನಗೆ ಆ ಟ್ರೈನ್ ಕೊಡಿಸ್ತೀಯಾ ಎಂದು ಕೇಳಿದ್ದಳು. ನನ್ನ ಕೈಯಲ್ಲಿ ಅಷ್ಟು ಹಣ ಇರಲಿಲ್ಲ. ಪಪ್ಪನ ಕೈಯಲ್ಲಿ ಅಷ್ಟೊಂದು ಹಣ ಇಲ್ಲ ಪುಟ್ಟಾ ಎಂದು ಸಂಕೋಚದಿಂದಲೇ ಹೇಳಿದೆ. ಅವಳು ಆಯ್ತು ಅಂದ್ಳು. ಅದರ ನಂತರ ಆಕೆ ಯಾವತ್ತೂ ನನಗೆ ಆಟಿಕೆ ತಂದು ಕೊಡು ಎಂದು ಕೇಳಲೇ ಇಲ್ಲ. ನಿನಗೆ ಬೊಂಬೆ ಬೇಕಾ? ಎಂದು ಕೇಳಿದಾಗ, ಈಗಾಗಲೇ ನನ್ನಲ್ಲಿ ಒಂದು ಬೊಂಬೆ ಉಂಟು...ಅದು ಸಾಕು ಪಪ್ಪಾ ಎಂದು ಉತ್ತರಿಸುತ್ತಿದ್ದಳು. ಅದೇ ಬೊಂಬೆಗೆ ಸ್ನಾನ ಮಾಡಿಸಿ, ಕಾಡಿಗೆ ಹಚ್ಚಿ ಶೃಂಗಾರಗೊಳಿಸುತ್ತಾ ಖುಷಿ ಖುಷಿಯಾಗಿ ಆಟವಾಡುತ್ತಿದ್ದ ಮಗಳ ಬಾಲ್ಯ ಈಗಲೂ ಕಣ್ಣ ಮುಂದಿದೆ.

ಅವಳು ದೊಡ್ಡವಳಾಗುತ್ತಿದ್ದಂತೆ ನಾನವಳ ಬೆಸ್ಟ್ ಫ್ರೆಂಡ್ ಆದೆ. ಏನೇ ವಿಷಯ ಇರಲಿ, ಆಕೆ ಮೊದಲು ಹೇಳುತ್ತಿದ್ದುದು ನನ್ನಲ್ಲೇ. ನಾನು ಸಂಜೆ ಮನೆಗೆ ಬರುವ ಹೊತ್ತಿಗೆ ಮನೆಯ ಮುಂದಿನ ಗೇಟಿನ ಪಕ್ಕ ನಿಂತು ನನ್ನ ದಾರಿ ನೋಡುತ್ತಿದ್ದಳು. ನಾನು ಬಸ್್ನಿಂದ ಇಳಿಯುವುದೇ ತಡ, ಓಡಿಕೊಂಡು ಬಂದು ನನ್ನ ಕೈ ಹಿಡಿದು ಹೆಜ್ಜೆ ಹಾಕುತ್ತಿದ್ದಳು. ಮನೆಗೆ ಬಂದ ಕೂಡಲೇ ಪಪ್ಪಾ, ಶಾಲೆಯಲ್ಲಿ ಹಾಗಾಯ್ತು, ಹೀಗಾಯ್ತು ಅಂತಾ ಅವಳು ಹೇಳದ ವಿಷಯಗಳೇ ಇರುತ್ತಿರಲಿಲ್ಲ. ಅವಳು ಎಲ್ಲೇ ಹೋಗಲಿ, ನಾನು ಅವಳ ಜತೆಗಿರಬೇಕು. ಕ್ಯಾಂಪ್್ಗೆ ಹೋದರೂ ಅಷ್ಟೇ...ಸಂಜೆ ಹೊತ್ತು ಆಕೆಯನ್ನು ಭೇಟಿ ಮಾಡಿ ಬರುತ್ತಿದ್ದೆ. ನಾನು ಹೊರಡುವ ಹೊತ್ತಿಗೆ ಆಕೆಯ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಆಕೆಯ ಕಣ್ಣೀರು ನೋಡಿದರೆ ನನಗೂ ಕಣ್ಣಲ್ಲಿ ನೀರು ಬರುತ್ತಿತ್ತು..ಅದಕ್ಕೇ ನಾನು ತಿರುಗಿ ನೋಡುತ್ತಿರಲಿಲ್ಲ.

ಆಕೆ ಬೆಳಗ್ಗೆ ಏಳುವಾಗಲೂ ಅಷ್ಟೇ..ಅಪ್ಪನ 'ಕಣಿ' ನೋಡಿದರೆ ದಿನ ಚೆನ್ನಾಗಿರುತ್ತೆ ಎಂದು ಹೇಳುತ್ತಿದ್ದಳು. ಇನ್ನು, ನಾನು ಬೆಳಗ್ಗೆ ಕೆಲಸಕ್ಕೆ ಹೊರಡುವ ಮುನ್ನ ಆಕೆಯ ಕೆನ್ನೆಗೆ ಮುತ್ತು ಕೊಡಲೇ ಬೇಕಿತ್ತು. ಶಾಲೆಗೆ ಹೋಗುವಾಗಲೂ ಅಮ್ಮನಿಗೆ ಒಂದು ಮುತ್ತು, ನನ್ನ ಪಪ್ಪನಿಗೆ ಎರಡು ಮುತ್ತು ಎನ್ನುತ್ತಾ ನನಗೇ ಜಾಸ್ತಿ ಮುತ್ತು ಕೊಡುತ್ತಿದ್ದವಳು. ಇನ್ನು ಬಹುಮಾನ ಸಿಕ್ಕಿದರಂತೂ ಎಕ್ಸ್್ಟ್ರಾ ಮುತ್ತು ಕೊಡಲೇ ಬೇಕಿತ್ತು. ನೈಲ್ ಪಾಲಿಷ್ ತಂದರೆ ನನ್ನ ಬೆರಳಿಗೆ ಮೊದಲು ಹಚ್ಚಿ ನೋಡುತ್ತಿದ್ದಳು, ಮೆಹಂದಿ ಡಿಸೈನ್ ಕಲಿಯಲು ನನ್ನ ಕೈಯೇ ಬೇಕು. ಅಡುಗೆ ಮಾಡಿದರಂತೂ ಮೊದಲು ನಾನೇ ತಿನ್ನಬೇಕು. ಆಕೆಯ ಎಲ್ಲ ಪ್ರಯೋಗಗಳಿಗೆ ನಾನೇ ಬೇಕಾಗಿತ್ತು. ಹೀಗೆ ಆಟ ಪಾಠಗಳ ಜತೆಗೆ ಶಾಲೆ, ಹೈಸ್ಕೂಲ್, ಕಾಲೇಜು ಎಲ್ಲವೂ ಮುಗಿದೇ ಹೋಯಿತು. ನೀನಿನ್ನು ದೊಡ್ಡವಳಾಗಿದ್ದೀಯ...ಚಿಕ್ಕ ಮಕ್ಕಳಂತೆ ಆಡ್ಬೇಡಾ ಎಂದು ಅಮ್ಮ ಪದೇ ಪದೇ ಗದರಿಸುವಾಗ, ನನ್ನ ಪಪ್ಪನಿಗೆ ನಾನು ಈಗಲೂ ಪಾಪು...ಅಲ್ವಾ ಪಪ್ಪಾ ಎಂದು ನನ್ನನ್ನು ಕೇಳುತ್ತಿದ್ದಳು. ನಾನು ಹೂಂ ಅನ್ನುತ್ತಿದ್ದೆ.

ಬಾಲ್ಯದಿಂದಲೂ ನನ್ನನ್ನೇ ಬಹಳ ಹಚ್ಚಿಕೊಂಡಿದ್ದ ನನ್ನ ಪಾಪು ಈಗ ನನ್ನ ಪಕ್ಕದಲ್ಲಿಲ್ಲ. ಹೊಟ್ಟೆಪಾಡಿಗಾಗಿ ದೂರದ ಊರು ಸೇರಿದ್ದಾಳೆ. ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಹೋಗ್ತಿದ್ದಾಳೆ. ಜೀವನ ಏನೆಂಬುದು ಆಕೆಗೆ ಅರ್ಥವಾಗಿದೆ. ಚಿಕ್ಕ ಹುಡುಗಿಯಂತೆ ಆಡುತ್ತಿದ್ದ ನನ್ನ ಪುಟ್ಟಿಗೆ ಪಕ್ವತೆ ಬಂದಿದೆ. ಅವಳು ಮನೆಗೆ ಬಂದರೆ ಸಾಕು...ಸಿಕ್ಕಾಪಟ್ಟೆ ಹರಟುತ್ತೇವೆ. ನಾನು ಪಪ್ಪಾನ ಮಗಳು...ಎಂದು ನನಗಂಟಿಕೊಂಡೇ ಇರ್ತಾಳೆ. ಉದ್ಯಾನ ನಗರಿಯ ಸಿಟಿ ಲೈಫ್ ಬಗ್ಗೆ, ಸುದ್ದಿ ಮಾಧ್ಯಮಗಳ ಬಗ್ಗೆಯೇ ಸಾಕಷ್ಟು ಮಾತಾಡ್ತೇವೆ. ರಜಾ ದಿನಗಳಲ್ಲಿ ಅವಳ ಜತೆ ಶಾಪಿಂಗ್ ಮಾಡುವುದೇ ಒಂಥರಾ ಗಮ್ಮತ್ತು. ಪಪ್ಪಾ ನಿನಗೇನು ಬೇಕು? ಎಂದು ಕೇಳುತ್ತಾ ನನಗೆ ಬೇಕಾದನ್ನೆಲ್ಲಾ ಕೊಡಿಸ್ತಾಳೆ. ಜಾಸ್ತಿ ಹಣ ಖರ್ಚು ಮಾಡ್ಬೇಡ ಪುಟ್ಟಾ ಎಂದು ಹೇಳಿದರೆ, ನಾನು ಸಿಕ್ಕಾಪಟ್ಟೆ ಖರ್ಚು ಮಾಡಲ್ಲ ಎಂಬುದು ನಿಮಗೆ ಗೊತ್ತಲ್ವಾ? ಉತ್ತರಿಸುತ್ತಾಳೆ. ರಸ್ತೆ ದಾಟುವಾಗ ನನ್ನ ಕೈ ಹಿಡಿದುಕೊಂಡು ಜಾಗ್ರತೆಯಿಂದ ದಾಟಿಸುತ್ತಾಳೆ. ಮೀನು ಮಾರುಕಟ್ಟೆಗೆ ಹೋದ್ರೆ...ಪಪ್ಪಾ ಜಾಸ್ತಿ ಮುಳ್ಳು ಇರುವ ಮೀನು ಬೇಡಪ್ಪಾ ಎಂದು ಹೇಳ್ತಾಳೆ. ಶಾಪಿಂಗ್ ಮುಗಿಸಿ ಅದೇ ಕೆನರಾ ಐಸ್್ಕ್ರೀಂ ಪಾರ್ಲರ್್ನಲ್ಲಿ ಕುಳಿತು ಐಸ್್ಕ್ರೀಂ ತಿನ್ನುತ್ತಾ ಎಂಜಾಯ್ ಮಾಡ್ತೀವಿ. ವ್ಯತ್ಯಾಸ ಇಷ್ಟೇ..ಅವಳು ಚಿಕ್ಕವಳಿರುವಾಗ ನಿನಗೇನು ಬೇಕು? ಎಂದು ನಾನು ಕೇಳ್ತಾ ಇದ್ದೆ..ಇವತ್ತು ಅವಳು ಕೇಳ್ತಾಳೆ. ಜೀವನ ಚಕ್ರ ತಿರುಗುತ್ತಿದೆ...ನೆನೆಪಿನ ದೋಣಿ ಹೀಗೆ ಸಾಗುತ್ತಲೇ ಇರುತ್ತದೆ. ನನ್ನ ಪುಟ್ಟಿ ದಿನಾ ಫೋನ್ ಮಾಡ್ತಾಳೆ..ಫೋನಿಡುವ ಹೊತ್ತಿಗೆ ಐ ಲವ್್ಯೂ ಪಪ್ಪಾ ಅಂತಾ ಹೇಳಿ ಮುತ್ತಿಡುತ್ತಾಳೆ. ಅವಳು ಖುಷಿಯಾಗಿದ್ದಾಳೆ...ನನಗಷ್ಟು ಸಾಕು!

Comments

@Vinayak Hegde
thank you so much
ನಿಮ್ಮ ಲೇಖನಿಯಲ್ಲಿ ಭಾವಗಳು ಸರಾಗವಾಗಿ ಹರಿಯುತ್ತವೆ ರಶ್ಮಿಯವರೆ.. ಅಪ್ಪ-ಮಗಳ ಸುಂದರ ಬಾಂಧವ್ಯವನ್ನು ನವಿರಾಗಿ ಕಟ್ಟಿಕೊಟ್ಟಿದ್ದೀರಿ.. ಸರಾಗಿವಾಗಿ ಓದಿಸಿಕೊಂಡು ಹೋಗುವ ಭಾವ ಲಹರಿ, ಸಕಾಲಿಕವಾಗಿ ಮೂಡಿ ನಿಂತಿದೆ.. ನಿಮ್ಮ ಲೇಖನಿಗೆ ಇನ್ನಷ್ಟು ಕೆಲಸ ಸಿಗಲಿ..:)))
Anuradha said…
ಅಭಿನಂದನೆಗಳು .ನಿಮ್ಮ ಬರಹ ಓದಿದಾಗ ಪ್ರಕಾಶ್ ರೈ ಅವರ "ನಾನು ಮತ್ತು ನನ್ನ ಕನಸು " ಚಿತ್ರ ನೆನಪಾಯಿತು .
ರಶ್ಮಿಯವರೇ, ಮೌಲ್ಯಯುತ ಲೇಖನ. ಸಕಾಲಿಕ ಕೂಡ. ಹೃದಯಸ್ಪರ್ಶಿ.
@DEW DROP (ಮಂಜಿನ ಹನಿ
@Anuradha
@ಪುಷ್ಪರಾಜ್ ಚೌಟ
ನಿಮ್ಮ ನೆಚ್ಚಿನ ಪ್ರತಿಕ್ರಿಯೆಗಳಿಗೆ ನನ್ನಿ
ಅನುರಾಗ,
ಹೃದಯ ಸ್ಪರ್ಶಿ ಲೇಖನ..........
ನಿಮ್ಮೀ ಬಾಂಧವ್ಯ ನೂರ್ಕಾಲ ಹೀಗೆ ಇರಲಿ.............

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ