ಬಸ್ ಪಯಣದ ಸುಖ

ಮೊನ್ನೆ ಶಿವಾಜಿನಗರಕ್ಕೆ ಹೋಗುತ್ತಿದ್ದಾಗ ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ಫೋನಲ್ಲಿ ಮಾತನಾಡುತ್ತಿರುವುದು ಬೇಡ ಬೇಡವೆಂದರೂ ನನ್ನ ಕಿವಿಗೆ ಬೀಳುತ್ತಿತ್ತು. ಸಾಮಾನ್ಯವಾಗಿ ಬಸ್‌ನಲ್ಲಿ ಪ್ರಯಾಣಿಸುವಾಗ ಕುಳಿತುಕೊಳ್ಳಲು ಸೀಟು ಸಿಕ್ಕರೆ ಪುಸ್ತಕ ಓದುವುದು ಅಭ್ಯಾಸ. ಅಂದು ಬಸ್ಸಿನಲ್ಲಿ ಜನ ತುಂಬಾ ಇದ್ದರೂ ಪುಣ್ಯಕ್ಕೆ ನನಗೆ ಸೀಟು ಸಿಕ್ಕಿತ್ತು. ಹಿಂದಿನ ಸೀಟಲ್ಲಿ ಕುಳಿತ ನನ್ನಷ್ಟೇ ವಯಸ್ಸಿನ ಹುಡುಗಿಯೊಬ್ಬಳು ವಟ ವಟ ಎಂದು ಫೋನಲ್ಲಿ ಮಾತು ಶುರು ಹಚ್ಚಿಕೊಂಡಿದ್ದಳು. ಇಂಗ್ಲೀಷ್‌ನಲ್ಲಿ ಆಕೆ ಜೋರಾಗಿ ಮಾತನಾಡುತ್ತಿದ್ದುದರಿಂದಲೇ ನನ್ನ ಕಿವಿ ನೆಟ್ಟಗಾಯಿತು. ವೈ ಯು ಇನ್‌ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್‌ವೀನ್. ಐ ಯೆಸ್ಟರ್‌ಡೇ ಟೋಲ್ಡ್ ನಾ..ಅಂಡರ್‌ಸ್ಟಾಂಡ್ ಪಾ..ಹೀಗೇ ಆಕೆಯ ಇಂಗ್ಲಿಷ್ ಸಂಭಾಷಣೆ ಮುಂದುವರಿಯಿತು. ಮಾತು ಮಾತುಗಳೆಡೆಯಲ್ಲಿ ಆಕೆ ನೋಪಾ, ಯೆಸ್ ಪಾ ಅಂತ ಹೇಳುತ್ತಾ ತನ್ನ ಏರುದನಿಯನ್ನು ಸ್ವಲ್ಪ ಸ್ವಲ್ಪವೇ ತಗ್ಗಿಸುತ್ತಿದ್ದಳು. ಒಮ್ಮೆ ಹಿಂತಿರುಗಿ ನೋಡಿದೆ, ಆಕೆ ಫೋನ್ ಸಂಭಾಷಣೆಯಲ್ಲಿ ಮಗ್ನಳಾಗಿದ್ದಾಳೆ. ಪುಸ್ತಕ ಹಿಡಿದುಕೊಂಡು ಕೂತಿದ್ದೆನಾದರೂ ವೈ ಯು ಇನ್‌ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್‌ವೀನ್ ಎಂಬ ವಾಕ್ಯ ನನ್ನ ಕಿವಿಗೆ ಬೇಡ ಬೇಡವೆಂದರೂ ಅಪ್ಪಳಿಸುತ್ತಿತ್ತು. ಆಕೆ ಹೇಳಿದ್ದು, ನೀನ್ಯಾಕೆ ಮಧ್ಯೆ ಮೂಗು ತೂರಿಸುತ್ತೀಯಾ ಎಂಬುದನ್ನೇ ಅಲ್ಲವೇ? ಕನ್ನಡ ಪ್ರತಿಪದವನ್ನೂ ಹಾಗೆಯೇ ಇಂಗ್ಲಿಷ್‌ಗೆ ಅನುವಾದ ಮಾಡಿ ಆಕೆ ಜೈ ಅಂದಿದ್ದಳು!.


ನಿಜ ಹೇಳಲಾ ...ನನಗೆ ಇಂಗ್ಲಿಷ್ ಭಾಷೆ ಅರ್ಥವಾಗುತ್ತದೆ ಬಿಟ್ರೆ ಮಾತನಾಡಲು ಬರುವುದು ಅಷ್ಟಕಷ್ಟೇ. ಇಂಗ್ಲಿಷ್ ಮಾತನಾಡಲು ಹೋದಾಗಲೆಲ್ಲಾ ಹಾಳಾದ ಗ್ರಾಮರ್ ನನ್ನ ನಾಲಗೆಗೆ ಅಡ್ಡ ಬಂದು ನಿಲ್ಲುತ್ತೆ. ವಾಸ್ ಬಳಸ್ಬೇಕೋ? ಈಸ್ ಬಳಸ್ಬೇಕೋ? ಡೋಂಟ್, ಕಾಂಟ್, ವೋಂಟ್, ವಿಲ್ ಎಲ್ಲವೂ ಸೇರಿ ನನ್ನನ್ನು ಕನ್‌ಫ್ಯೂಸ್ ಮಾಡಿಸಿ, ಇಂಗ್ಲಿಷ್‌ನ್ನು ನನ್ನ ಗಂಟಲಲ್ಲೇ ಸ್ಟಾಪ್ ಆಗುವಂತೆ ಮಾಡುತ್ತಿದ್ದವು. ಕೆಲಮೊಮ್ಮೆ ಯಾರಾದರೂ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ತಕ್ಷಣ ನಾನು ಉತ್ತರ ಕೊಟ್ಟು ಬಿಡುತ್ತಿದ್ದೆ. ಅಲ್ಲಿ ಯಾವ ತಪ್ಪುಗಳು ನುಸುಳುತ್ತಿರಲಿಲ್ಲ. ಮಾತನಾಡಿದ ನಂತರ ಅರೇ... ನಾನೇ ಇಂಗ್ಲಿಷ್ ಮಾತಾಡಿದೆನಾ? ಎಂದು ಅಚ್ಚರಿಯಾಗಿ ಬಿಡುತ್ತಿತ್ತು. ಅಂದ ಹಾಗೆ ಬಸ್ಸಲ್ಲಿರುವಾಗ ಯಾರಾದ್ರೂ ಫೋನ್ ಮಾಡಿ ಇಂಗ್ಲಿಷ್‌ನಲ್ಲಿ ಮಾತನಾಡಬೇಕಾದ ಪರಿಸ್ಥಿತಿ ಬಂದರೆ ಐ ವಿಲ್ ಕಾಲ್ ಯು ಲೇಟರ್ ಎಂಬುದೇ ನನ್ನ ಉತ್ತರ. ಇನ್ನು ಕೆಲವರು ಬಸ್ಸಲ್ಲಿ ಕುಳಿತು ನಾಲ್ಕು ಮಂದಿಗೆ ಕೇಳುವಂತೆ ಟುಸ್ಸು ಪುಸ್ಸು ಇಂಗ್ಲಿಷ್ ಮಾತನಾಡುತ್ತಿರುತ್ತಾರೆ. ಕೆಲವರು ಮಾತನಾಡಿದ ಮೇಲೆ ಎಷ್ಟು ಜನರು ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ಕಣ್ಣಲ್ಲೇ ಲೆಕ್ಕ ಹಾಕುತ್ತಿರುತ್ತಾರೆ. ಇಂಥಾ ದೃಶ್ಯಗಳೆಲ್ಲ ನಿಮ್ಮ ಅನುಭವಕ್ಕೆ ಬರಬೇಕಾದರೆ ನೀವು ಬೆಂಗಳೂರಿನ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಲೇ ಬೇಕು.

ನಾನು ಹೇಳೋಕೆ ಹೋಗ್ತಿರುವುದು ಕೂಡಾ ಬಸ್ಸಿನ ಬಗ್ಗೆಯೇ. ಯಾಕೆ ಗೊತ್ತಾ? ಈ ಬಸ್ಸು ಪ್ರಯಾಣದಲ್ಲಿ ಸಿಗುವ ಅನುಭವಗಳೇ ಬೇರೆ. ಎಷ್ಟೊಂದ್ ಇಲ್ಲಿ ಯಾರು ನನ್ನವರು? ಎಂಬ ತಳಮಳದಿಂದಲೇ ಬಸ್ಸಿಗೆ ಹತ್ತಿದರೆ, ಇಲ್ಲಿ ಎಲ್ಲ ನನ್ನವರು ಅನ್ನೋ ಭಾವನೆ ಮೂಡಿಸುವಂತೆ ಮಾಡುವುದೇ ಈ ಬಸ್ಸುಗಳು. ಇಲ್ಲಿ ಯಾರು ಮೇಲೂ ಅಲ್ಲ ಕೀಳು ಅಲ್ಲ. ಬಡವ ಶ್ರೀಮಂತನೆಂಬ ಅಂತರವಾಗಲೀ, ಜಾತಿ ಭೇದದ ಗೋಡೆಯಿಲ್ಲದೆ ಎಲ್ಲರನ್ನು ಒಂದೇ ರೀತಿ ಉಪಚರಿಸುವ ವಾಹನವೆಂದರೆ ಅದು ಬಸ್ಸು. ನನಗೆ ಬೇಗ ಹೋಗ್ಬೇಕು ಎಂಬ ಅವಸರವಿರುವವರೂ, ನನಗೆ ನಿಧಾನ ಹೋದರೆ ಸಾಕು ಎಂಬ ಎರಡೂ ಮನಸ್ಥಿತಿಯಿರುವವರು ಇಲ್ಲಿ ಒಂದೇ ರೀತಿ ವರ್ತಿಸುತ್ತಾರೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕುವೆಂಪು ಹೇಳುವಂತೆ

ಇಲ್ಲಿ

ಯಾರೂ ಮುಖ್ಯರಲ್ಲ

ಯಾರೂ ಅಮುಖ್ಯರಲ್ಲ

ಯಾವುದೂ ಯಃಕಶ್ಚಿತವಲ್ಲ

ಇಲ್ಲಿ

ಯಾವುದಕ್ಕೂ ಮೊದಲಿಲ್ಲ

ಯಾವುದಕ್ಕೂ ತುದಿಯಿಲ್ಲ

ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ

ಕೊನೆ ಮುಟ್ಟುವುದೂ ಇಲ್ಲ!

ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!

ಎಂಬಂತಿರುತ್ತದೆ ಬಸ್ಸಲ್ಲಿನ ಈ ಪ್ರಯಾಣಗಳು.

ನೀವು ಯಾವ ಊರಿನವರೇ ಆಗಿರಲಿ ಅವರವರಿಗೆ ಅವರವರ ಊರಿನ ಬಸ್ಸಿನೊಂದಿಗೆ ಒಂಥರಾ ಸೆಂಟಿಮೆಂಟು ಇದ್ದೇ ಇರುತ್ತದೆ. ದೂರದ ಊರಲ್ಲಿರುವಾಗ ನಮ್ಮೂರಿಗೆ ಹೋಗುವ ಬಸ್ಸುಗಳು ಕಾಣಸಿಕ್ಕರೆ ನಮ್ಮೂರಿನ ಬಸ್ಸು...ಆ ಕ್ಷಣಕ್ಕೆ ಊರಿನ ನೆನಪು ಬಿಡದೆ ಕಾಡುತ್ತದೆ. ಈಗಲೇ ಊರಿಗೆ ಹೋಗಿ ಬಿಡಲೇನೋ ಎಂದು ಅನಿಸಿಬಿಡುವುದೂ ಉಂಟು. ಅಷ್ಟೊಂದು ಸೆಳೆತವಿರುತ್ತೆ ಈ ಬಸ್ಸುಗಳಲ್ಲಿ. ಬಸ್ಸಿನ ಹೆಸರು, ನಮ್ಮೂರಿನ ಹೆಸರು ಬರೆದಿರುವ ಬೋರ್ಡ್‌ಗಳನ್ನೋದಿದ ನಂತರ ಅದು ಕಣ್ಣ ಮುಂದೆ ಹಾದು ಹೋದಾಗ ಹಿಂಬದಿಯಲ್ಲಿ 'ನಡುವೆ ಅಂತರವಿರಲಿ' ಎಂದು ಬರೆದ ವಾಕ್ಯಗಳನ್ನು ಕೂಡಾ ಮತ್ತೆ ಮತ್ತೆ ಓದಿ ಕಣ್ತುಂಬಿಕೊಳ್ಳುತ್ತೇವೆ. ಆ ಕ್ಷಣದಲ್ಲಿ ಬಸ್ಸು ನಮ್ಮ ಪಾಲಿಗೆ ನೆನಪಿನ ಬಂಡಿಯಾಗುತ್ತದೆ.

ಅಮ್ಮ ಹೇಳ್ತಾರೆ, ನಮ್ಮೂರಲ್ಲಿ ಕೆಎಂಎಸ್ ಎಂಬ ಹೆಸರಿನ ಬಸ್ಸೊಂದಿತ್ತಂತೆ. ಹಳ್ಳಿಯಿಂದ ನಗರಕ್ಕೆ ಸಂಪರ್ಕ ಸಾಧಿಸುವ ಏಕೈಕ ಬಸ್ಸೆಂದರೆ ಅದು ಕೆಎಂಎಸ್. ಬೆಳಗ್ಗೆ 7.00 ಗಂಟೆಗೆ ಸರಿಯಾಗಿ ಅದು ನಮ್ಮ ಹಳ್ಳಿಗೆ ತಲುಪುತ್ತಿತ್ತು. ಆವಾಗ ನಮ್ಮ ಹಳ್ಳಿಯ ಜನರಿಗೆಲ್ಲಾ 7 ಗಂಟೆ ಅಂದರೆ ಕೆಎಂಎಸ್ ಬರುವ ಹೊತ್ತು. ಗಂಟೆ ಎಷ್ಟಾಯಿತು? ಎಂದು ಕೇಳಿದರೆ ಕೆಎಂಎಸ್ ಇನ್ನೂ ಬಂದಿಲ್ಲ ಅಂದ್ರೆ ಗಂಟೆ ಏಳು ಆಗಿಲ್ಲವೆಂದೇ ಲೆಕ್ಕ. ಆ ಬಸ್ಸು ಯಾವತ್ತೂ ಲೇಟಾಗಿ ಬರುತ್ತಿರಲಿಲ್ಲ. ಮೂವತ್ತೈದು ವರುಷಗಳ ಹಿಂದೆ ಪಟ್ಟಣಕ್ಕೆ ಹೋಗುವ ಹಳ್ಳಿಯ ಜನರೆಲ್ಲರೂ ಒಂದಾಗಿ ಸೇರುವಂತೆ ಮಾಡಿದ್ದೇ ಆ ಬಸ್ಸು. ಕೂಲಿ ಕಾರ್ಮಿಕರಿಂದ ಹಿಡಿದು ಸರ್ಕಾರಿ ಉದ್ಯೋಗಸ್ಥರು, ವಿದ್ಯಾರ್ಥಿಗಳು, ಗಾರೆ, ಗದ್ದೆ ಕೆಲ್ಸಕ್ಕೆ ಹೋಗುವ ಎಲ್ಲರೂ ಪರಸ್ಪರ ಬೆರೆಯುವಂತೆ ಮಾಡಿದ ಕೀರ್ತಿಯೂ ಆ ಬಸ್ಸಿನದ್ದೇ.

ಅಲ್ಲಿವರೆಗೆ ಮನೆ ಪಕ್ಕದಲ್ಲೇ ಇದ್ದ ಶಾಲೆಯಲ್ಲಿ ಓದುತ್ತಿದ್ದ ನನಗೆ ಹೈಸ್ಕೂಲ್‌ಗೆ ಸೇರಿದಾಗ ಬಸ್ಸಲ್ಲಿ ಹೋಗುವುದು ಅನಿವಾರ್ಯವಾಗಿತ್ತು. ಮಣ ಭಾರದ ಬ್ಯಾಗನ್ನು ಹೊತ್ತು ಬಸ್ಸಿನಲ್ಲಿ ಬ್ಯಾಲೆನ್ಸ್ ಮಾಡುವುದು, ಶಾಲಾ ಮಕ್ಕಳನ್ನು ನಿರ್ಲಕ್ಷಿಸುವ ಸಲುವಾಗಿ ಬಸ್ಸ್ಟಾಪಿನಿಂದ ದೂರ ನಿಲ್ಲಿಸಿದರೆ ಅದರ ಹಿಂದೆಯೇ ಓಡುತ್ತಾ ಹೋಗಿ ಹತ್ತುವುದು ಎಲ್ಲವನ್ನೂ ಮಾಡಲೇಬೇಕಾಗಿತ್ತು.

ಅಪ್ಪಿ ತಪ್ಪಿ ಸೀಟು ಸಿಕ್ಕಿತು ಅಂತ ಕುಳಿತುಕೊಂಡರೆ ವಿದ್ಯಾರ್ಥಿಗಳು ಯಾರೂ ಸೀಟಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಕಂಡೆಕ್ಟರ್ ಗದರಿಸುತ್ತಿದ್ದ. ನಮ್ಮ ಬೆನ್ನಲ್ಲಿರುವ ಬ್ಯಾಗ್‌ನ್ನು ಸಂಭಾಳಿಸಿಕೊಂಡು ಕಂಬಿ ಹಿಡಿದು ನೇತಾಡುತ್ತಾ, ಕಂಡೆಕ್ಟರ್ ಬೈಗುಳಕ್ಕೆ ಗುರಿಯಾಗುತ್ತಾ ಶಾಲೆಗೆ ಹೋಗಿ ಬರುವುದು ಸಾಹಸವೇ ಆಗಿ ಬಿಡುತ್ತಿತ್ತು. ಅದರಲ್ಲಿಯೂ ಕಾಲೇಜ್ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಹೋದರೆ, ಕಂಡೆಕ್ಟರ್ ಏನಾದರೂ ಕಿರಿಕ್ ಮಾಡಿದರೆ ಇಲ್ಲವೇ ಸರ್ಕಾರದ ವಿರುದ್ಧ ಏನೇ ಕೋಪವಿದ್ದರೂ ನಮ್ಮೂರಲ್ಲಿ ಎಲ್ಲರ ಕೋಪಕ್ಕೆ ಗುರಿಯಾಗುವುದು ಮಾತ್ರ ಬಸ್ಸುಗಳೇ ಆಗಿದ್ದವು. ಬಸ್ಸಿಗೆ ಕಲ್ಲು ಹೊಡೆದು ಗಾಜು ಒಡೆಯುವುದು ಪ್ರತಿಭಟನೆಯ ಸಂಕೇತವಾಗುತ್ತಿತ್ತು. ಹಾಗೆಯೇ ಹತ್ತು ಮುಖಗಳ ಹುಚ್ಚು ಮನಸ್ಸುಗಳು ಹೇಗೆ ಇರುತ್ತವೆ ಎಂಬ ಅನುಭವವೂ ಇಲ್ಲಿ ಸಿಗುತ್ತಿತ್ತು.

ಬಸ್ಸು ಕೇವಲ ವಾಹನವಲ್ಲ ಅದೊಂದು ಸ್ನೇಹಸೇತುವೆ. ಬೆಳಗ್ಗಿನ ಹೊತ್ತು ಏದುಸಿರು ಬಿಡುತ್ತಾ ಓಡೋಡಿ ಬರುವ ಬೀಡಿ ಕಾರ್ಖಾನೆಯ ಹೆಂಗೆಳೆಯರು, ಟೈಲರಿಂಗ್ ಕಲಿಯಲು ಹೋಗುವ ಹುಡ್ಗೀರು, ಕಾಲೇಜು ಕನ್ಯೆಯರು, ಟಿಪ್ ಟಾಪ್ ಆಗಿ ಕೈಯಲ್ಲಿ ಎರಡು ಪುಸ್ತಕ ಹಿಡಿದು ನಿನ್ನೆ ನಡೆದ ಕ್ರಿಕೆಟ್ ಮ್ಯಾಚ್ ಬಗ್ಗೆ ಚರ್ಚಿಸುವ ಜವ್ವನಿಗರು, ಸರ್ಕಾರಿ ಉದ್ಯೋಗಸ್ಥರು, ಕೂಲಿ ಕೆಲಸದ ಗಂಡಸರು ಎಲ್ಲರೂ ಒಂದೇ ಸೂರಿನಡಿ ಮಾತಿಗಿಳಿಯುವುದು, ಸ್ನೇಹಿತರಾಗುವುದು ಕೂಡಾ ಈ ಬಸ್ಸಿನಲ್ಲೇ. ಬಸ್ಸು ಪ್ರಯಾಣದ ವೇಳೆ ಎಲ್ಲರನ್ನೂ ಸುಮ್ನೆ ಗಮನಿಸುತ್ತಾ ಹೋಗಿ, ಅವರ ಮುಖದಲ್ಲಿನ ಮೌನಗಳೆಲ್ಲವೂ ಮಾತಾಗುತ್ತಾ ಹೋಗುತ್ತವೆ. ಹಾಗೆ ಹೇಳುವಾಗ ನಮ್ಮೂರಲ್ಲಿನ ಬೀಡಿ ಕಟ್ಟುವ ಹೆಂಗಸರ ಬಗ್ಗೆ ಇಲ್ಲಿ ಹೇಳಲೇ ಬೇಕು. ಆಗ ತಾನೇ ಸ್ನಾನ ಮುಗಿಸಿ ಗಡಿಬಡಿಯಲ್ಲಿಯೂ ಒಪ್ಪವಾಗಿ ಸೀರೆಯುಟ್ಟು ಓಡುತ್ತಾ ಬರುವ ಇವರ ನೀಳ ಕೂದಲಿನಿಂದ ನೀರ ಹನಿ ಜಿನುಗುತ್ತಾ ಇರುತ್ತದೆ. ಆ ಹೆಂಗಸರು ಬಸ್ ಸ್ಟಾಪ್‌ಗೆ ಬಂದು ಸೇರಲು ಇದ್ದ ಅಡ್ಡ ದಾರಿಗಳು, ತಡಮೆ ಬೇಲಿಗಳನ್ನೆಲ್ಲಾ ದಾಟಿ ಬಿರಬಿರನೆ ಬರುತ್ತಿದ್ದರೆ ಕಂಕುಳ ಬೆವರು ಕುಪ್ಪಸದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಒದ್ದೆ ಕಲೆ ಮೂಡಿಸುತ್ತಿರುತ್ತದೆ. ಬಸ್ಸಲ್ಲಿ ನಿಂತರೆ ವ್ಯಾನಿಟಿ ಬ್ಯಾಗ್‌ನಲ್ಲಿರಿಸಿದ ಅವರ ಊಟದ ಬುತ್ತಿ ಪಕ್ಕದಲ್ಲಿ ನಿಂತಿರುವವರಿಗೆ ತಾಕುತ್ತಾ ಆಗಾಗ್ಗೆ ಬಿಸಿ ಮುಟ್ಟಿಸುತ್ತಿರುತ್ತದೆ. ಇತ್ತ ಕಾಲೇಜು ಕನ್ಯೆಯರ ಕಿಲ ಕಿಲ ಸದ್ದು. ಹುಡ್ಗೀರನ್ನು ಇಂಪ್ರೆಸ್ ಮಾಡೋಕೆ ಟ್ರೈ ಮಾಡುತ್ತಿರುವ ಹುಡುಗರು ಒಂದೆಡೆಯಾದರೆ ಹುಡುಗಿರ ಮಧ್ಯೆ ನುಸುಳುತ್ತಾ ಟಿಕೆಟ್ ಟಿಕೆಟ್ ಎಂದು ಬೊಬ್ಬೆ ಹಾಕುತ್ತಾ ಮೈ ಸವರುವ ಕಿಲಾಡಿ ಕಂಡೆಕ್ಟರ್. ತನ್ನ ಸೀಟಿನ ಹಿಂದೆ ನಿಂತ ಹುಡುಗಿಯರನ್ನು ಕನ್ನಡಿ ಮೂಲಕವೇ ನೋಡಿ ಕಣ್ತುಂಬಿಕೊಳ್ಳುವ ಡ್ರೈವರ್. ರೈಟ್ ಪೋಯೀ... ಎಂದು ಕೂಗುವ ಕ್ಲೀನರ್...ಆಗ ತಾನೇ ಕಾಲೇಜಿಗೆ ಕಾಲಿಟ್ಟ ಟೀನೇಜ್ ಹುಡ್ಗೀರಿಗೆ ಕ್ರಷ್ ಆಗುವುದು ಕೂಡಾ ಈ ಕಂಡೆಕ್ಟರ್, ಡ್ರೈವರ್‌ಗಳ ಮೇಲೆಯೇ ಎಂಬುದನ್ನು ನೀವು ಒಪ್ಪಲೇ ಬೇಕು. ಸಂಜೆ ಹೊತ್ತಿನ ಪಯಣವಾಗಿದ್ದರೆ ಸುಸ್ತಾಗಿ ಬಾಡಿದ ಮುಖಗಳು, ಮನೆ ಸೇರುವ ತವಕದಲ್ಲಿರುವ ಜೀವಗಳು, ಕತ್ತಲೆಯ ಅಂಜಿಕೆಯಿಂದಲೇ ಸಪ್ಪಗಾದವರು ಹೀಗೆ ಎಲ್ಲರ ಬೆವರಿನ ವಾಸನೆ ಗಾಳಿಯಲ್ಲಿ ಬೆರೆತು ಬೇರೆಯದ್ದೇ ಆದ ಅನುಭವವನ್ನು ನೀಡುತ್ತಿರುತ್ತದೆ.

ಅಂತೂ ಬಸ್ಸಲ್ಲಿ ಸೀಟು ಸಿಕ್ಕಿತು ಅಂತಾ ಅಂದ್ಕೊಳ್ಳಿ, ಅಲ್ಲಿ ಕುಳಿತು ಪಟ್ಟಾಂಗ ಹೊಡೆಯುವಾಗ ಚರ್ಚಿತವಾಗುವ ವಿಷಯಗಳು ಕೂಡಾ ಇಂಟರೆಸ್ಟಿಂಗ್ ಆಗಿರುತ್ತವೆ. ಊರಿಗೆ ಯಾರಾದರೂ ಹೊಸಬರು ಬಂದರೆ, ಅವರ್ಯಾರು? ಎಂದು ಕುತೂಹಲದಿಂದ ನೋಡುವ ಪ್ರಯಾಣಿಕರು ಆಮೇಲೆ ಅವರ ಬಗ್ಗೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಬಿಡುತ್ತಾರೆ. ಉಡುಗೆ ತೊಡುಗೆಗಳಿಂದ ಹಿಡಿದು ದೇವಸ್ಥಾನದ ಬ್ರಹ್ಮಕಲಶ, ಪಕ್ಕದ್ಮನೆ ಹುಡುಗಿ ಓಡಿ ಹೋಗಿದ್ದು, ರಾಜಕಾರಣ, ಮುಂದಿನ ಮುಷ್ಕರ, ಧರಣಿ ಎಲ್ಲ ವಿಷಯಗಳು ಇಲ್ಲಿ ಚರ್ಚೆಗೀಡಾಗುತ್ತವೆ. ಪ್ರಯಾಣದ ನಡುವೆ ಆಪ್ತರಾಗುವವರು ಕೆಲವರಾದರೆ ಪ್ರಯಾಣ ಮಧ್ಯೆಯೇ ಪ್ರೀತಿಯಂಕುರಿಸಿ ಮದುವೆಯಾದವರೇನೂ ಕಮ್ಮಿಯೇನಿಲ್ಲ. ಸೀಟಲ್ಲಿ ಕುಳಿತ ಕೂಡಲೇ ನಿದ್ದೆಗೆ ಜಾರುವ ನಿದ್ರಾಧಿಪತಿಗಳು ಒಂದೆಡೆಯಾದರೆ ಸೀಟಿಗಾಗಿ ಜಗಳವಾಡುವ ಮಂದಿಯೂ ಇಲ್ಲಿರುತ್ತಾರೆ. ಪೇಪರ್, ಕರ್ಚೀಫ್ ಅಥವಾ ಇನ್ಯಾವುದೋ ವಸ್ತುಗಳನ್ನಿಟ್ಟು ಕಾಯ್ದಿರಿಸಿದ ಸೀಟಿನಲ್ಲಿ ಯಾರದ್ರೂ ಕುಳಿತುಕೊಂಡರೆ ಅಷ್ಟೇ... ಅಲ್ಲೊಂದು ಜಗಳ ಗ್ಯಾರಂಟಿ!. ಇನ್ಯಾರೋ ದೂಡಿದ್ರೂ, ಹೈ ಹೀಲ್ಡ್ ಚಪ್ಪಲಿ ಹಾಕಿ ತುಳಿದು ಬಿಟ್ರು ಅನ್ನೋ ವಿಷಯದಿಂದ ಹಿಡಿದು ಮಹಿಳೆಯರ ಹಿಂದೆ ನಿಂತ ಗಂಡಸರ ಕಿತಾಪತಿ, ಚೇಷ್ಟೆ ಮಾಡಿದಾಗ ಅನುಭವಿಸುವ ನೋವು, ಸಂಕಟ, ಆಕ್ರೋಶ, ಕಣ್ಣೀರು , ಬೈಗುಳ ಎಲ್ಲವೂ ಬಸ್ಸೆಂಬ ಈ ವಾಹನದೊಳಗೆ ಮಾಮೂಲಿ.

ಹಳ್ಳಿಯ ಬಸ್ಸು ಪ್ರಯಾಣದ ಅನುಭವ ಒಂದು ರೀತಿಯದ್ದಾಗಿದ್ದರೆ ಬೆಂಗಳೂರಿನ ಬಸ್ಸು ಪ್ರಯಾಣದ ಅನುಭವ ಇನ್ನೊಂದು ರೀತಿಯದ್ದಾಗಿರುತ್ತದೆ. ಮಹಾನಗರಗಳಲ್ಲಿ ಬಸ್ಸುಗಳ ಸಂಖ್ಯೆಯೂ ಜಾಸ್ತಿಯಿರುವುದರಿಂದ ಸಹ ಪ್ರಯಾಣಿಕರ ನಡುವೆ ಸಂಬಂಧಗಳು ಬೆಳೆಯುವುದು ಕಷ್ಟ. ವಿಧ ವಿಧದ ಉಡುಗೆ ತೊಟ್ಟು ಹತ್ತು ಹಲವು ಭಾಷೆಗಳಲ್ಲಿ ಮಾತನಾಡುವ ವಲಸಿಗರು ಒಂದೆಡೆಯಾದರೆ, ಸ್ಟೈಲಿಷ್ ಡ್ರೆಸ್ ತೊಟ್ಟು ಕಂಗ್ಲೀಷ್ನಲ್ಲಿ ಮಾತನಾಡುವ ಬೆಂಗಳೂರಿಗರು ಎಲ್ಲರೂ ಬಿಎಂಟಿಸಿ ಬಸ್ಸಿನ ಪ್ರಯಾಣಿಕರಾಗುತ್ತಾರೆ. ಅವರವರ ಲೆವೆಲ್‌ಗೆ ತಕ್ಕಂತೆ ಇಲ್ಲಿ ಯಾವ ಬಸ್ಸಿನಲ್ಲಿ ಬೇಕಾದರೂ ಪ್ರಯಾಣಿಸಬಹುದಾದರೂ ಬಿಎಂಟಿಸಿ ಬಸ್ಸುಗಳು ನೀಡುವ ಅನುಭವ ಬೇರ್ಯಾವ ಬಸ್ಸಿನಲ್ಲಿಯೂ ಸಿಗುವುದಿಲ್ಲ. ಕಿಕ್ಕಿರಿದು ತುಂಬಿದ ಬಸ್ಸುಗಳಲ್ಲಿ ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖಗಳನ್ನು ಹುಡುಕಾಡುತ್ತಾ ಎಫ್ ಎಂನಲ್ಲಿ ಹಾಡುಕೇಳುತ್ತಾ ತಮ್ಮದೇ ಲೋಕದಲ್ಲಿ ವಿಹರಿಸುವ ಮಂದಿಯೇ ಇಲ್ಲಿ ನಿಮ್ಮ ಸಹಪ್ರಯಾಣಿಕರು.

ಒಂದ್ಸಾರಿ ನಾನು ಜಯನಗರಕ್ಕೆ ಹೋಗುತ್ತಿರುವಾಗ ಲೇಡೀಸ್ ಸೀಟಿನಲ್ಲಿ ಕಾಲೇಜಿನ ಯುವ ಜೋಡಿಯೊಂದು ಕುಳಿತಿತ್ತು. ಆ ಜೋಡಿ ತಮ್ಮದೇ ಲೋಕದಲ್ಲಿ ಮಗ್ನರಾಗಿದ್ದಾಗ ಲೇಡೀಸ್ ಸೀಟು ಎದ್ದೇಳಿ ಎಂಬ ಆಂಟಿಯೊಬ್ಬರ ದನಿ ಅವರನ್ನು ವಾಸ್ತವಕ್ಕೆ ಮರಳುವಂತೆ ಮಾಡಿತು. ಆಂಟಿಯ ಮಾತು ಕೇಳಿ ಹುಡುಗ ಸೀಟು ಬಿಟ್ಟುಕೊಡಲು ನೋಡಿದರೂ, ಹುಡುಗಿ ಅವನ ಕೈ ಹಿಡಿದು ಜಗ್ಗುತ್ತಾ ಕೂತ್ಕೊಳೋ ಏನಾಗಲ್ಲ ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ ಆಂಟಿಗೆ ಸಿಟ್ಟು ಬಂದು ಇದು ಲೇಡೀಸ್ ಸೀಟು ನೀನು ಎದ್ದೇಳು ಎಂದು ಕಿರುಚಾಡಿದ್ರು. ಇಷ್ಟಕ್ಕೆ ನಿಲ್ಲಿಸದ ಆಕೆ ಈ ಹುಡುಗ್ರಿಗೆಲ್ಲಾ ಬಸ್ಸಲ್ಲಿ ಜತೆ ಜತೆಯಾಗಿಯೇ ಕುಳಿತುಕೊಳ್ಳಬೇಕು. ಜತೆಯಾಗಿಯೇ ಕುಳಿತುಕೊಳ್ಳಬೇಕಾದ್ರೆ ಪಾರ್ಕ್ ಬೆಂಚಲ್ಲಿ ಹೋಗಿ ಕುಳಿತುಕೊಳ್ಳಲಿ ಎಂದು ಬೈಯೋಕೆ ಶುರು ಮಾಡಿಬಿಟ್ರು. ಪಾರ್ಕ್ ಬೆಂಚಲ್ಲಿ ಕುಳಿತುಕೊಂಡರೆ ಬಸ್ಸಿನಲ್ಲಿ ಸಿಗುವ ಮೂವಿಂಗ್, ಜಂಪಿಂಗ್ ಎಫೆಕ್ಟ್ ಸಿಗಲ್ವೇ?ಎಂದು ಮನಸ್ಸಿನಲ್ಲೇ ಹೇಳಿಕೊಂಡು ನಕ್ಕೆ. ಆಗಲೇ ಆ ಯುವ ಜೋಡಿ ಸೀಟು ಬಿಟ್ಟು ಹಿಂದೆ ಹೋಗಿ ನಿಂತು ಬಿಟ್ಟಿದ್ದರು. ಇಂಥಾ ಮನರಂಜನೆಗಳ ನಡುವೆ ಹುಡುಗಿಯೊಬ್ಬಳ ವ್ಯಾಕ್ಸಿಂಗ್ ಮಾಡಿಸಿದ ನೀಳ ತೋಳುಗಳು, ನೇಲ್ ಪಾಲಿಶ್ ಹಚ್ಚಿದ ಆಕೆಯ ಕೈಬೆರಳುಗಳು, ಪರ್‌ಫ್ಯೂಮಿನ ಘಮ,ವಿಧ ವಿಧದ ರಿಂಗ್ ಟೋನ್‌ಗಳ ಸದ್ದುಗಳು, ವಿವಿಧ ಭಾಷೆಯಲ್ಲಿನ ಸಂಭಾಷಣೆಗಳು ಎಲ್ಲವನ್ನೂ ಒಂದೇ ಕಡೆಯಲ್ಲಿ ನೋಡಿ, ಕೇಳಿ ಅನುಭವಿಸಬೇಕಾದರೆ ಬಿಎಂಟಿಸಿ ಬಸ್ಸಲ್ಲಿ ಓಡಾಡಲೇ ಬೇಕು. ಜನರಿಂದ ತುಂಬಿ ತುಳುಕುವ ಬಸ್ಸು ಪಯಣದ ಮಧ್ಯೆ ಆಗ್ಗಾಗ್ಗೆ ನಮ್ಮ ಫೋನ್, ವ್ಯಾಲೆಟ್ ಗಳು ಚೋರಿಯಾಗಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳುತ್ತಾ, ಇಳಿಯುವ ನಿಲ್ದಾಣ ಬಂತಾ? ಎಂದು ಇಣುಕುತ್ತಾ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡು ಹೋಗುವುದೇ ಮಾಯಾನಗರಿಯ ಬಸ್ ಪಯಣದ ಗಮ್ಮತ್ತು. ಹಿಂದೆ ಹೋಗ್ರಿ ಎನ್ನುತ್ತಾ ಗಂಡಸರನ್ನು ಹಿಂದೆ ನೂಕುವ ಕಂಡೆಕ್ಟರ್ ಅಂಕಲ್, ಕಂಬ ಬಟ್ಟು ಹಿಂದೆ ಹೋಗಮ್ಮಾ..ಪಾಸ್ ತೋರ್ಸಿ... ಮುಂದೆ ಚೆಕಿಂಗ್ ಇದೆ ಟಿಕೆಟ್ ತೆಗೆದುಕೊಳ್ಳಿ ಎನ್ನುವ ಕಂಡೆಕ್ಟರ್‌ನ ಮಾತಿನ ನಡುವೆ ಎಕ್ಸ್‌ಕ್ಯೂಸ್‌ಮೀ, ಸೈಡ್ ಪ್ಲೀಸ್ ಅನ್ನೋ ಪುಟ್ ಪುಟ್ ಇಂಗ್ಲೀಷ್ ವಾಕ್ಯಗಳು ಜನರ ಮಧ್ಯೆ ಕೇಳಿಬರುವುದು ಈ ಬೆಂದಕಾಳೂರಿನಲ್ಲೇ.

ಇದೆಲ್ಲಾ ದಿನ ನಿತ್ಯದ ಪ್ರಯಾಣ ಅನುಭವಗಳಾದರೆ ದೂರದೂರಿಗೆ ಹೋಗುವ ಬಸ್ಸು ಪ್ರಯಾಣದಲ್ಲಿ ಸಿಗುವ ಅನುಭವಗಳನ್ನಾಧರಿಸಿಯೇ ಒಂದು ಸಿನಿಮಾ ತಯಾರಿಸಬಹುದು ಎಂದು ಅನಿಸುತ್ತಿದೆ. ಪರವೂರಿಗೆ ಹೋಗುವ ಖುಷಿ, ಇನ್ಯಾವುದೋ ದುಃಖದಿಂದ ಬಳಲಿದ ಮುಖಗಳೇ ಇಲ್ಲಿ ಕತೆ ಹೇಳುತ್ತಿರುತ್ತವೆ. ತನ್ನ ಊರಿಗೆ ಮರಳುತ್ತಿರುವ ವ್ಯಕ್ತಿಯ ಮುಖದಲ್ಲಿ ಕಾಣುವ ಸಂತಸ, ಊರು ಬಿಡುವ ಹೊತ್ತಲ್ಲಿನ ಸಂಕಟ, ಇನ್ಯಾವುದೋ ಖುಷಿಯ ಸಮಾರಂಭಗಳಲ್ಲಿ ಭಾಗವಹಿಸಲು ತೆರಳುತ್ತಿರುವ ಮಂದಿ, ಇನ್ಯಾರದೋ ವ್ಯಕ್ತಿಯ ಅಂತಿಮ ದರ್ಶನಕ್ಕಾಗಿ ತೆರಳುವ ಜನರು ಎಲ್ಲರೂ ಇಲ್ಲಿ ಮುಖಾ ಮುಖಿಯಾಗುತ್ತಾರೆ. ಎಲ್ಲರಿಗೂ ಹೇಳಲು ಅವರದ್ದೇ ಆದ ಕಥೆಗಳಿರುತ್ತವೆ, ದುಗುಡ, ದುಮ್ಮಾನ ಮತ್ತು ಖುಷಿಗಳಿರುತ್ತವೆ. ಆದರೆ ದೂರದ ಊರಿಗೆ ಹೋಗುತ್ತಿದ್ದೇವೆ. ಜತೆಯಲ್ಲಿರುವ ಪ್ರಯಾಣಿಕರು ಹೇಗೆ ಏನೋ ಅಂಥ ಗೊತ್ತಿಲ್ಲ. ಅಪರಿಚಿತರಲ್ಲಿ ಮಾತನಾಡಿ ಪೇಚಿಗೆ ಸಿಲುಕುವುದು ಬೇಡ ಎಂದು ಎಲ್ಲರೂ ಅವರವರ ಪಾಡಿಗೆ ಇದ್ದು ಬಿಡುತ್ತಾರೆ . ಕ್ರಮಿಸಬೇಕಾದ ಹಾದಿ ದಿನಗಟ್ಟಲೆ ಇದ್ದರೂ ಸಹ ಪ್ರಯಾಣಿಕರೊಂದಿಗೆ ಮಾತನಾಡಲು ಹಿಂಜರಿಕೆ. ಒಬ್ಬರೇ ಪ್ರಯಾಣ ಮಾಡುತ್ತಿದ್ದರಂತೂ ಇನ್ನಿಲ್ಲದ ಚಡಪಡಿಕೆ. ಪಕ್ಕದಲ್ಲಿ ಕುಳಿತವರು ಏನಾದರೂ ತಿನ್ನೋಕೆ , ಕುಡಿಯೋಕೆ ಕೊಟ್ಟರೆ ಸಂಶಯದಿಂದಲೇ ಅದನ್ನು ನೋಡಿ 'ನೋ ಥ್ಯಾಂಕ್ಸ್, ಇಲ್ಲ ನನಗೇನೂ ಬೇಡ 'ಎಂದು ಹೇಳಿ ಸುಮ್ಮನಾಗುತ್ತೇವೆ. ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದು ಯಾರಿಗೆ ಗೊತ್ತು? ಎಂಬ ಭಾವನೆಯಿಂದಲೇ ಅಷ್ಟೊಂದು ಪ್ರಯಾಣಿಕರಿರುವ ಬಸ್ಸಿನಲ್ಲಿ ನಾವು ಏಕಾಂತ ಬಯಸುತ್ತೇವೆ. ಕೆಲವೊಂದ್ಸಾರಿ ನಾವೇ ಸಹಪ್ರಯಾಣಿಕರ ಜತೆ ಮಾತಿಗಿಳಿದು ಏಕಾಂತದ ಚಿಪ್ಪಿನಿಂದ ಹೊರಬರಲು ಹವಣಿಸುತ್ತೇವೆ. ಹೀಗೆ ಪ್ರತಿಯೊಂದು ಸ್ಟಾಪಿನಲ್ಲಿಯೂ ಸಿಗುವ ಹೊಸ ಮುಖಗಳು, ಇಳಿದು ಹೋಗುವ ಪರಿಚಿತ ಮುಖಗಳು ಅವರ ಜತೆ ಒಡನಾಡಿದ ಅನುಭವಗಳ ಮೂಟೆ ಹೊತ್ತು ನಮ್ಮ ಪ್ರಯಾಣ ಮುಂದುವರಿಯುತ್ತಿರುತ್ತದೆ. ಇಲ್ಲಿ ಪ್ರತಿಯೊಂದು ಪಯಣವೂ ನಮಗೆ ಹೊಸತೊಂದು ಅನುಭವವನ್ನು ನೀಡುತ್ತಾ ಹೋಗುತ್ತದೆ. ಅದು ಖುಷಿಯ ಕ್ಷಣಗಳಾಗಿರಬಹುದು, ನೋವಿನ ಸಂಗತಿಗಳಾಗಿರಬಹುದು, ಮುಜುಗರಕ್ಕೊಳಗಾದ, ಅವಮಾನಕ್ಕೊಳಗಾದ ಘಟನೆಗಳೇ ಆಗಿರಬಹುದು, ಎಲ್ಲ ನಿನ್ನೆಗಳಲ್ಲಿ ಒಂದೊಂದು ರೀತಿಯ ಅನುಭವವನ್ನು ಇಂಥಾ ಪ್ರಯಾಣಗಳು ನಮಗೆ ನೀಡಿರುತ್ತವೆ. ಊರು- ಪರವೂರು ಯಾವುದೇ ಇರಲಿ ಅಲ್ಲಿನ ಬಸ್ಸು ಪ್ರಯಾಣಗಳು ನಮ್ಮ ಅನುಭವದ ಪುಟಗಳಲ್ಲಿ ಪ್ರತ್ಯೇಕ ಸ್ಥಾನವನ್ನು ಗಳಿಸಿಕೊಂಡಿರುತ್ತವೆ. ಒಂದಷ್ಟು ಸಿಹಿ, ಮತ್ತೊಂದಿಷ್ಟು ಕಹಿ ಎನ್ನುವ ಜೀವನದ ಎಲ್ಲ ಕ್ಷಣಗಳನ್ನು ಪ್ರಯಾಣದೊಂದಿಗೆ ಅನುಭವಿಸಬೇಕಾದರೆ ಬಸ್ಸಲ್ಲಿ ಪ್ರಯಾಣಿಸಲೇ ಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಈ ರೀತಿಯ ಪ್ರಯಾಣಗಳು ನೆನಪಿನ ಸುರುಳಿ ಬಿಚ್ಚುವಂತೆ ಮಾಡುತ್ತದೆ. ನೆನಪಿನ ಪುಸ್ತಕದ ಹಾಳೆಯಲ್ಲಿ ಬಸ್ಸು ಓಡಾಟ ಆರಂಭಿಸಿಯಾಗಿದೆ. ಪ್ರತೀ ನಿಲ್ದಾಣವೂ ಕಥೆ ಹೇಳುತ್ತಿದೆ, ಅನುಭವಗಳು ಹಾರ್ನ್ ಹೊಡೆಯುತ್ತಾ ಬದುಕಿನ ದಾರಿಯನ್ನು ಕ್ರಮಿಸುತ್ತಾ ಮುನ್ನುಗ್ಗುತ್ತಿದೆ.


ಅಕ್ಕ ಸಮ್ಮೇಳನ 2014-'ಹರಟೆಕಟ್ಟೆ' ಲಲಿತ ಪ್ರಬಂಧ ಸಂಕಲನದಲ್ಲಿ ಪ್ರಕಟಿತ ಬರಹ

Comments

ಹೌದು ಹಳ್ಳಿಗಾಡಿನ ಬಸ್ಸುಗಳಲ್ಲಿನ ಪ್ರಯಾಣದ ಅನುಭವ ವಿಶೇಷ ತರದ್ದೆ. ರಾಗಿ, ಹುರುಳಿ ಬಡಿದು ಬೀಸುವ ಕಾಲವಾದರಂತೂ ರೈತಾಪಿ ಜನರು ಟಾರು ರೋಡನ್ನೇ ಕಣ ಮಾಡಿಕೊಳ್ಳುತ್ತಾರೆ, ಆಗ ಪ್ರಯಾಣ ಮಾಡಿದರೆ ಎಲ್ಲ ಅಲಂಕಾರಗಳು ವ್ಯರ್ಥ, ಹಾಗಾಗಿ ಅಂತಹ ಕಾಲದಲ್ಲಿ ಕೆಲವರು ಮೈಲಿ ದೂರವಾದರೂ ಸರಿ ನಡೆದೇ ಹೆದ್ದಾರಿಯಲ್ಲಿ ಸಿಗುವ ಬಸ್ ಹಿಡಿದು ತಮ್ಮ ಅಲಂಕಾರ ಉಳಿಸಿಕೊಳ್ಳುತ್ತಾರೆ.. "ಮುಂದೆ ಸೀಟಿಲ್ಲ ಬಾಲ್ಕನಿಗೆ ಬನ್ನಿ..." ಎನ್ನುವುದು ನಮ್ಮ ಕಂಡಕ್ಟರ ಡೈಲಾಗ್ ಕೂಡ.

Popular posts from this blog

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ