ಮತ್ತೆ ಬ್ಲಾಗ್ ಬಾಗಿಲು ತೆರೆದಿದ್ದೇನೆ...




ಬದುಕು ಆ ಕ್ಷಣಕ್ಕೆ ಖಾಲಿ ಖಾಲಿ ಅನಿಸಿಬಿಡುತ್ತದೆ.ಗುರುವೋ ಗುರಿಯೋ ಇಲ್ಲದಂತೆ ಕಾಣುತ್ತದೆ.ಮುಂದೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಎಲ್ಲಿಗೆ ಹೋಗಬೇಕು, ಎಲ್ಲಿ ನಿಲ್ಲಬೇಕು ಎಂಬ ಯಾವುದೇ ನಿರ್ಧಾರವಿಲ್ಲದೆ ಅದೊಂದು ಪಯಣ.ಕುಟುಂಬದಲ್ಲಿನ ಆಪ್ತರ ಅಗಲಿಕೆ ಬದುಕನ್ನು ನಲುಗಿಸಿ ಬಿಟ್ಟಿತ್ತು. ಒಂದಷ್ಟು ದಿನ ಅತ್ತು ಮತ್ತೆ ಕಣ್ಣೀರು ಒರೆಸಿ ನಿತ್ಯ ಕಾಯಕಕ್ಕೆ. ಎಲ್ಲ ನೋವುಗಳನ್ನು ನುಂಗಿ ನಗುವುದೆಷ್ಟ ಕಷ್ಚ. ಮನೆಯಲ್ಲಿ ಸೂತಕದ ಛಾಯೆ. ಎಲ್ಲರ ಮುಖದಲ್ಲೂ ದುಃಖ ,ಅವರಲ್ಲಿ ನನ್ನ ದುಃಖವನ್ನು ತೋಡಿಕೊಳ್ಳುವುದಾದರೂ ಹೇಗೆ? ಈ ಬದುಕು ನಶ್ವರ, ಹುಟ್ಟಿದವರು ಒಂದು ದಿನ ಸಾಯಲೇ ಬೇಕು ಎಂಬುದು ನಿತ್ಯ ಸತ್ಯ. ಆದರೆ ಸಾವು ಅದನ್ನು ಅರಗಿಸಿಕೊಳ್ಳುವುದು ಕಷ್ಟದ ವಿಷಯ. ಕೆಲಸದಲ್ಲಿ ತಲ್ಲೀನರಾಗಿದ್ದು ಬಿಟ್ಟರೆ ನೋವು ಗೊತ್ತಾಗುವುದಿಲ್ಲ. ಆದರೆ ಅದರ ನಡುವೆ ಸಿಕ್ಕ ಗ್ಯಾಪ್ ನಲ್ಲಿ ಆ ಸಾವು-ನೋವು ಚುಚ್ಚಿ ಬಿಡುತ್ತದೆ. ಇವತ್ತು ನಮ್ಮ ಜತೆ ಇದ್ದವರು ಮತ್ತೆ ಇಲ್ಲ, ಅವರು ತಿರುಗಿ ಬರುವುದೇ ಇಲ್ಲ ಎಂದು ಮನಸ್ಸಿಗೆ ಹೇಳುತ್ತಾ ಇದ್ದರೂ ಕಾಯುವಿಕೆ ಕಣ್ಣುಗಳಲ್ಲಿ ನೀರು ತುಂಬಿಸುತ್ತದೆ. 

 ಈ ಜಗತ್ತೇ ಬೇಡ ಎಂದು ಕಿರುಚಿ ಹೇಳುವುದೋ, ಈ ಬದುಕು ಸಾಕಾಗಿದೆ ಎಂದು ಬಿಕ್ಕಿ ಬಿಕ್ಕಿ ಅಳುವುದೋ...ಇದನ್ನು ಗೊಂದಲವೆನ್ನಲೋ ಮನಸ್ಸಿನ ನೋವು ಎನ್ನಲೋ. ಕತ್ತಲೆ ಕೋಣೆಯೊಂದರಲ್ಲಿ ನನ್ನನ್ನು ಬಂಧಿಸಿಟ್ಟ ಸ್ಥಿತಿ. ಕಿರುಚಿದ್ದು, ಅತ್ತಿದ್ದು ಕೂಗಿದ್ದು ಯಾರಿಗೂ ಕೇಳಿಸುವುದೇ ಇಲ್ಲ.. ಯಾಕೆಂದರೆ ಈ ಎಲ್ಲ ನೋವುಗಳು ಹೊರಗಿನ ಜಗತ್ತಿಗೆ ತೋರಿಸಿಕೊಂಡೇ ಇಲ್ಲ. ಮನಸ್ಸನ್ನು ಬೇರೆಡೆಗೆ ಕೇಂದ್ರೀಕರಿಸಲು ಅದೆಷ್ಟು ಕಸರತ್ತು. ಕಿವಿಗೆ ಹೆಡ್ ಫೋನ್ ಸಿಕ್ಕಿಸಿ ಹಾಡು ಕೇಳಿದ್ದಾಯ್ತು, ಪುಸ್ತಕಗಳನ್ನು ತಿರುವಿ ಹಾಕಿದ್ದು,ಸಿನಿಮಾ ನೋಡಿದ್ದು ಯಾವುದೂ ಮನಸ್ಸಿಗೆ ಸಮಾಧಾನ ಕೊಡುತ್ತಿಲ್ಲ. 


ಒಂದಷ್ಟು ಹೊತ್ತು ಮನಸ್ಸು ತೆರೆದು ಮಾತಾಡಬೇಕು. ಯಾರಲ್ಲಿ ಮಾತನಾಡಲಿ? ಅಲ್ಲೀಯೂ ಖಾಲಿತನ, ಕಾಡುವ ಒಂಟಿತನ ಹೇಳಬೇಕಾದ ಮಾತುಗಳನ್ನು ನಾನೇ ತಡೆದು ನಿಲ್ಲಿಸಿದ್ದೇನೆ. ಒಂದು ಹೊತ್ತು ಮಾತನಾಡಲು ಹಂಬಿಲಿಸದ ಮನಸ್ಸು ಇನ್ನೊಂದು ಹೊತ್ತು ಮೌನವೇ ಸಾಕು ಎಂದು ರಚ್ಚೆ ಹಿಡಿದು ಕೂರುತ್ತದೆ. ಯಾರ ಸಾಮಿಪ್ಯ, ಸಾಂಗತ್ಯವೂ ಸಮಾಧಾನ ಕೊಡುವುದಿಲ್ಲ.

ಒತ್ತರಿಸಿ ಬರುವ ನೆನಪುಗಳು ಕಣ್ಣೊದ್ದೆ ಮಾಡುವಾಗ ನನ್ನ ಮೇಲೆಯೇ ಸಿಟ್ಟು ಬರುತ್ತದೆ.ಯಾಕೆ ನಾನು ಹೀಗೆ ಎಂದು ಬಹಳಷ್ಟು ಬಾರಿ ಅನಿಸಿದ್ದು ಇದೆ. This too shall pass ಎಂದು ನನಗೇ ನಾನು ಹೇಳಿಕೊಳ್ಳುತ್ತೇನೆ. ಎದೆ ಮೇಲೆ ಕೈಯಿಟ್ಟು ಆಲ್ ಈಸ್ ವೆಲ್ ಎಂದು ಹೇಳುವಾಗಲೂ ಆ ಕಾನ್ಫಿಡೆನ್ಸ್ ಬರುತ್ತಿಲ್ಲ. ಎಲ್ಲವೂ ಶೂನ್ಯ ಎಂದು ಮುದುಡಿ ಕೂತು ಕಣ್ಣೀರು ಹಾಕಿ ಸುಸ್ತಾದಾಗ ನಾನೇ ಎದ್ದೇಳುತ್ತೇನೆ, 0 ಹತ್ತಿರ 1 ಎಂದು ಬರೆದು 10 ಎಂದು ಓದುತ್ತೇನೆ. ಬದುಕು ಪಾಠ ಕಲಿಸುತ್ತಲೇ ಇರುತ್ತದೆ.ಎಡವಿ ಬೀಳುತ್ತಾ ಕಲಿಕೆ ಮುಂದುವರಿದಿದೆ.ಎಷ್ಟೋ ವರ್ಷಗಳಿಂದ ತಿರುಗಿಯೂ ನೋಡದ ಬ್ಲಾಗ್ ಮತ್ತೆ ಜೀವಂತವಾಗುತ್ತಿದೆ.ಮತ್ತೆ ಬರೆಯಬೇಕು ಎಂದು ಮನಸ್ಸು ಬಯಸಿದಾಗ...ಮತ್ತೆ ಇಲ್ಲಿ ಬಂದು ಬಾಗಿಲು ತೆರೆದಿದ್ದೇನೆ.

Comments

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ