Posts

ನಾನು ಮತ್ತು ಬದುಕು...

ಮನದ ಮೂಲೆಯಲ್ಲಡಗಿದ ಒಂದಷ್ಟು ದುಗುಡಗಳು ಇನ್ನೊಮ್ಮೆ ನನ್ನ ಮನವನ್ನರಳಿಸಿದ ಒಂದಿಷ್ಟು ಭಾವನೆಗಳನ್ನ ಹೆಕ್ಕಿ ಚಿತ್ತಾರ ಬಿಡಿಸಿದಾಗ ಅದನ್ನು ಕವನವೆಂದು ಗೀಚಿದ್ದೆ... ದುಗುಡ ದುಮ್ಮಾನಗಳು ಎದೆಯ ಕುಕ್ಕಿ ಕಣ್ಣೀರು ಹರಿಸಿದಾಗ ಕಷ್ಟದಾ ಸುಳಿಯಲ್ಲಿ ಬೇಸತ್ತಿರಲು ಈ ಜೀವನವ ನಾನಂದು ನರಕವೆಂದು ಕರೆದಿದ್ದೆ.... ಏಳು ಬೀಳುಗಳ ನಡುವೆ ಸಾಗುವುದೀ ಜೀವನವು ಸುಖ ದುಃಖಗಳು ಇವು, ಕ್ಷಣಿಕವೆಂದಾಗ ಒಮ್ಮೆ ಅತ್ತಿದ್ದೆ, ಮತ್ತೆ ನಕ್ಕಿದ್ದೆ ಕಾಲ ಸರಿಯಲು ಹೀಗೆ.. ಜಗದ ನಿಯಮವಿದೆಂದು ನಾನಾಗ ಅರಿತಿದ್ದೆ.

ನೀನು ನನ್ನವನು...

ನನ್ನ ಸ್ವಪ್ನಲೋಕದ ಸುಪ್ತ ಕನಸುಗಳ ಸರಮಾಲೆ ನಿನ್ನನಾವರಿಸಿರಲು ನಿನ್ನ ಬೆಚ್ಚನೆಯ ನೆನಪುಗಳು ಮತ್ತೊಮ್ಮೆ ಕೆಣಕುತಿರಲು ಇನಿಯಾ ಇನ್ನೇಕೆ ತಡ? ಬಂದು ಬಿಡು ಈ ಹೃದಯದಲಿ ಪ್ರೀತಿ ಬಾಗಿಲು ಇದೋ ನಿನಗಾಗಿ ತೆರೆದಿಡುವೆ... ಮಂದ ಮಾರುತವೀಗ ಪ್ರಣಯರಾಗವ ನುಡಿಸಿರಲು ಸುಮಲತೆಯ ನಡುವೆ ದುಂಬಿಗಳ ಚುಂಬನದಿ ಬಿಸಿಯಪ್ಪುಗೆಯ ಸುಖ ನೀಡುವಿಯಂತೆ ಪ್ರೀತಿ ಲೋಕದ ಹಾದಿಯಲಿ ಇದೋ ನಿನಗಾಗಿ ಕಾದಿರುವೆ... ನಿನ್ನ ನಗೆಯಲ್ಲಿ ಲೋಕ ಮರೆಯುವೆನಾಗ ನಿನ್ನ ತೋಳಬಂಧನದಲ್ಲಿ ಒಮ್ಮೆ ಬಂಧಿಯಾಗುವ ಆಸೆ ನಿನ್ನ ಕೈ ಹಿಡಿದು ಮಳೆ ನೆನೆಯುವಾ ಬಯಕೆ ಎಂದೆಂದೂ ನೀ ನನ್ನವನಾಗಿ ಬಿಡು ನೀನು ನನ್ನವನು, ನನ್ನವನು ಮಾತ್ರ ನಾನೆಂದು ನಿನ್ನ ಪ್ರೀತಿಯಾಗಿರುವೆ.

ಮೊಬೈಲ್ ಪ್ರೇಮ...

ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈಲ್ ಗೇಮ್ ಬೋರ್ ಅನಿಸಿದಾಗ ಅವರಿಬ್ಬರೂ ಮಾತಿಗಿಳಿದರು. ಆಕೆ ನಾಚಿಕೊಳ್ಳುತ್ತಾ ಮಾತನಾಡುತ್ತಿದ್ದಂತೆ ಆತ ತನ್ನ ಮೊಬೈಲ್ ನಂಬರ್ ನೀಡಿದ.ರೈಲು ದೂರ ದೂರ ಸಾಗುತ್ತಿದ್ದಂತೆ ಅವರಿಬ್ಬರೂ ಹತ್ತಿರವಾಗುತ್ತಿದ್ದರು. ಅವಳು ಇಳಿಯಬೇಕಾದ ಸ್ಟಾಪ್ ಸಮೀಪಿಸುತ್ತಿದ್ದಂತೆ ಅವಳ ಮೊಬೈಲ್ ನಿಂದ ಒಂದು missed call.ಅವರಿಬ್ಬರೂ ಪರಸ್ಪರ ಮಿಸ್ ಮಾಡಿಕೊಳ್ಳ ತೊಡಗಿದರು. ಸ್ಟಾಪ್ ಬಂತು ಆಕೆ ಇಳಿದು ಹೋದಳು.ಅವಳ missed callಗೆ ಅವ ಕಾಲ್ ಮಾಡಿದ.. ಹೀಗೆ ಆ ಜೋಡಿ ಹಲವಾರು ಬಾರಿ recharge ಮಾಡಿಸಿ ಗಂಟೆಗಟ್ಟಲೆ ಹರಟಿದರು.Inbox ಪ್ರೇಮ ಸಂದೇಶಗಳಿಂದ ತುಂಬಿ ತುಳುಕುವಾಗ,ಪ್ರೇಮದ ringtone ಅವರಿಬ್ಬರ ಮನದಲ್ಲಿ ರಿಂಗಣಿಸುತ್ತಿತ್ತು.ಹೀಗಿರುವಾಗ ಒಂದು ದಿನ ಆ ಜೋಡಿ Out of coverage areaದಲ್ಲಿ ಭೇಟಿಯಾದರು.ಅವನು ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿರುವುದಾಗಿ ಭರವಸೆ ನೀಡಿದ. ಆಕೆ ಅವನ ಹೃದಯದಲ್ಲಿ ತನಗೆ Lifetime Validity ಇದೆ ಎಂದು ನಂಬಿದಳು. ಹೀಗೆ ಕಾಲ ಕಳೆಯಿತು...ನಂತರ ಇವಳ missed callಗೆ ಅವ ಕಾಲ್ ಮಾಡಲಿಲ್ಲ.ಇವಳು ಕಾಲ್ ಮಾಡಿದಳು..Call waiting...ಪುನಃ ಮಾಡಿದಳು..Number Busy... ತನ್ನೊಂದಿ...

ಪ್ರೀತಿ -ದೇವರು

ನೀನ್ಯಾಕೆ ನನ್ಮುಂದೆ ನಿನ್ನ ಪ್ರೀತಿ ತೋರಿಸುತ್ತಿಲ್ಲ? ಅವನೆಂದ ಪ್ರೀತಿ ದೇವರಂತೆ! ನಾನು ಪ್ರೀತಿ ತೋರಿಸದಿದ್ದರೂ ನೀನು ನನ್ನನ್ನೇ ಸದಾ ನೆನೆಯುತ್ತಿರುವಿಯಲ್ಲಾ?

ಅಮ್ಮನ ಒಲವಿನ ಓಲೆ.....

ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್ಟೆಲ್‌ನಲ್ಲಿಯೇ ಇರಬೇಕಾದ ಪರಿಸ್ಥಿತಿ. ವಾರದಲ್ಲಿ ಸಿಗುವ ಒಂದೇ ಒಂದು ದಿನ ರಜಾದಿನ ಹಾಸ್ಟೆಲ್‌ನ ರೂಮಿನಲ್ಲಿ ಕಳೆಯುವಾಗ ಯಾಕೋ "ಏಕಾಂಗಿತನ" ನನ್ನನ್ನು ಆವರಿಸುತ್ತದೆ. ಸಾಧಾರಣ ಹುಡುಗಿಯರಂತೆ ಶಾಪಿಂಗ್, ಔಟಿಂಗ್ ಇಷ್ಟವಿಲ್ಲದ ನನಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ, ಅನ್ಯಭಾಷೀಯರ ಪರಿಸರದಲ್ಲಿ ಪುಸ್ತಕಗಳೇ ಉತ್ತಮ ಸಂಗಾತಿಯಾಗಿವೆ. ಹಾಸ್ಟೆಲ್‌ನ ಕಿಟಿಕಿಯಿಂದ ಹೊರಗಿಣುಕಿದರೆ ತುಂತುರು ಮಳೆಹನಿಗಳು ಮರದೆಲೆಯಿಂದ ಜಾರುತ್ತಿತ್ತು. ಕೈಗೆತ್ತಿದ ಪುಸ್ತಕವೂ ಓದಬೇಕೆಂಬ ಮೂಡ್ ಇರಲಿಲ್ಲ. ಆದಾಗಲೇ ನನ್ನ ಕಣ್ಣಿಗೆ ಬಿದ್ದದ್ದು ಕಂದು ಬಣ್ಣದ ಕವರ್. ಅದು ತುಂಬಾ ಅಮೂಲ್ಯವಾದದ್ದು. ಯಾಕೆ ಗೊತ್ತಾ? ಅದರಲ್ಲಿ ತುಂಬಾ ಸಿಹಿಮುತ್ತುಗಳಿವೆ, ವಾತ್ಸಲ್ಯವಿದೆ. ಸ್ನೇಹ, ಸಲಹೆ, ಮಮತೆ, ಕಾಳಜಿ ತುಂಬಿದ ಪತ್ರ ಅದು. ಈ ಚುಮುಚುಮು ಚಳಿಯಲ್ಲಿ ಕಂದು ಬಣ್ಣದ ಕವರ್‌ನೊಳಗೆ ನನ್ನ "ಅಮ್ಮನ ಪತ್ರ" ಬೆಚ್ಚನೆ ಕುಳಿತುಕೊಂಡಿದೆ. ಅದು ಕೈಗೆತ್ತಿಕೊಂಡ ಕೂಡಲೇ ಯಾಕೋ ಮನಸ್ಸು ನಿರಾಳವಾಗುತ್ತಿದೆ. ಭಗವಾನ್ ಶ್ರೀಕೃಷ್ಣ ಯುದ್ದ ಭೂಮಿಯಲ್ಲಿ ಕುಸಿದು ಕುಳಿತ ಅರ್ಜುನನಿಗೆ ಗೀತೋಪದೇಶ ನೀಡಿ ಹುರುಪು ಹುಟ್ಟಿಸಿದಂತ...

ವಾಸ್ತವ

ಮುಂಜಾನೆ ಮಿಂದು ದೇವರಿಗೆ ನಮಿಸುವಾಗ ಅಮ್ಮ ಹೇಳುತ್ತಿದ್ದಳಾಗ, ಕೈ ಮುಗಿದು ಕಣ್ಮುಚ್ಚಿ ಬೇಡಿದರೆ ಈಶ ಒಲಿವನೆಂದು.. ಸಂಧ್ಯಾವಂದನೆ ವೇಳೆ ದೀಪ ಉರಿಸಿ ನನ್ನ ಅಜ್ಜಿ ರಾಮನಾಮ ಜಪಿಸುತಿರಲು ಕಣ್ಣೆರಡು ಮುಚ್ಚಿ ನಾನೂ ದನಿಗೂಡಿಸುತ್ತಿದ್ದೆ.. ಇರುಳ ಬಾನಂಗಳದಲ್ಲಿ ಕೋಟಿ ತಾರೆಗಳು ಮಿನುಗುವಾಗ ನಿದ್ದೆ ಬರುತ್ತಿಲ್ಲ ತಾತ, ಕತೆ ಹೇಳೆಂದು ಸತಾಯಿಸಿದಾಗ ಸುಮ್ಮನೆ ಕಣ್ಣು ಮುಚ್ಚಿರು ನಿದ್ದೆ ತಂತಾನೆ ಬರುವುದು ಎಂದು ಅಪ್ಪ ಗದರಿಸಿದಾಗ ಕಣ್ಣೆರಡು ಮುಚ್ಚಿ ಮಗ್ಗಲೆಳೆದು ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ ಬಾಲ್ಯವೆಷ್ಟು ಮಧುರವಾಗಿತ್ತು! ಕಣ್ತೆರೆದರೆ ಸುಂದರ ಲೋಕ ಮುಚ್ಚಿದರೆ ಸ್ವಪ್ನ ಲೋಕಕ್ಕೆ ಪಯಣ ಬೆಳೆಸುತಲಿದ್ದೆ ಕಾಲ ಚಕ್ರವು ತಿರುಗುತಿರಲು ಪ್ರಸ್ತುತಕ್ಕೆ ಮೊದಲ ಹೆಜ್ಜೆಯಿಟ್ಟು, ಸುತ್ತ ಕಣ್ಣು ಹಾಯಿಸಿದರೆ... ಹಗೆ ಹೊಗೆಯಾಡುವ ಜಗದಲ್ಲಿ ನಗೆ ಮಾಸಿದ ಜೋಲು ಮುಖ! ಜೀವ ತೆಗೆಯಲು ಕತ್ತಿ ಮಸೆಯುವ ಜನ, ಇನ್ನೊಂದೆಡೆ, ಜೀವಕ್ಕಾಗಿ ಬೇಡುವ ಮನ ಹಣದಾಸೆಗಾಗಿ ಜೀವ ಹಿಂಡುವವರು, ಬೇಡುವವರು, ಮುಂದೆ ಕೈ ಚಾಚಿ ಜಗದಳುವಿನ ಮುಂದೆ ನಿಸ್ಸಹಾಯಕ,ಮೂಕಪ್ರೇಕ್ಷಕ ನಾನು ಹಿಂಸೆಗಳು ಕಣ್ಮುಂದೆ ನರ್ತನವಾಡಿದರೂ ನಾ ಬಂಧಿ, ಕಟ್ಟುಪಾಡುಗಳ ಸೆರೆಮನೆಯಲ್ಲಿ ದನಿಯೆತ್ತಲು ಚಡಪಡಿಸಿ ಸೋತಾಗ ಎರಡು ಹನಿ ಕಣ್ಣೀರೆರೆದು ಮತ್ತೆ, ನನಗಿದರ ಅರಿವೇ ಇಲ್ಲದವನಂತೆ ಕಣ್ಣು ಮುಚ್ಚಿಕೊಳ್ಳುತ್ತೇನೆ!

ದ್ವಂದ್ವ

ನಿರೀಕ್ಷೆಗಳೇ… ನನ್ನ ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ? ಅತೃಪ್ತ ಜೀವನದಿ ತೃಪ್ತಿಯ ಕೃತಕ ನಗುವನು ಚೆಲ್ಲಿ ಮುಸುಕೆಳೆದು ಮಲಗಿದರೂ ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು? ಪ್ರತೀಕ್ಷೆಗಳೇ….. ಬರಡು ಜೀವನವೆಂದು ಬಿಕ್ಕಿ, ಕಣ್ಣ ಹನಿ ಉಕ್ಕಿದಾಗ ಭೂತಕಾಲದ ನಗುವ ಸೆಲೆಯನು ವರ್ತಮಾನದ ತೀರಗಳಿಗಪ್ಪಳಿಸಿ ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ? ಪರೀಕ್ಷೆಗಳೇ… ನಾಲ್ಕು ದಿನದ ಜೀವನವು ಬೇವು ಬೆಲ್ಲ, ಹಾವು ಹೂವಿನ ಹಾದರವು ಇದುವೆಂದು ಕಲಿಸುವ ಗುರುಗಳೇ.. ದಿನವೂ ಬರುವಿರಿ ಕ್ಷಣ ಕ್ಷಣದ ಹೆಜ್ಜೆಯಲಿ ಗುರುತ ಮೂಡಿಸಿ ಮತ್ತೊಮ್ಮೆ ಛೇಡಿಸಿ, ಜೀವನದ ನಕ್ಷೆಯಲಿ ಮೈಲಿಗಲ್ಲುಗಳಂತೆ ಹುಟ್ಟುಹಾಕುವಿರಿ ಅನುಭವದ ಒರತೆಯನು ಕಟ್ಟಿ ಹಾಕುವಿರಿ ಪ್ರೀತಿ-ದ್ವೇಷದ ಸರಪಳಿಯಲ್ಲಿ ಜೀವನವ ತೇಯ್ದು ತೆವಳುವಾಗ… ಇದನೇನೆಂದು ಕೊಳ್ಳಲಿ ಶಿಕ್ಷೆಯೇ? ಅಥವಾ ಬದುಕಲಿರುವ ಅಪೇಕ್ಷೆಯೇ???