ಕಾಡುವ ನೆನಪುಗಳಿಗೂ ಇದೆ ಘಮ
ರಜೆ ಇದ್ದಾಗಲೆಲ್ಲ ಹೀಗೆಯೇ..ಅದೆಷ್ಟು ಪ್ರಯತ್ನಿಸಿದರೂ ನಿದ್ದೆ ಬರುವುದಿಲ್ಲ. ಆಫೀಸಿಗೆ ಹೋಗದೇ ಇರುವ ದಿನ ಬೇಡವೆಂದರೂ ಬೇಗ ಎಚ್ಚರವಾಗುತ್ತದೆ. ನಾಳೆ ಆಫೀಸು ಇದೆ, ಬೆಳಗ್ಗೆ ಬೇಗ ಏಳಲೇ ಬೇಕು ಎಂದು ಮೊಬೈಲ್ ದೂರ ಇರಿಸಿ ಮಲಗಿಕೊಂಡು ಇನ್ನೇನು ನಿದ್ದೆ ಬಂತು ಅನ್ನುವಾಗ ಮೂಗಿಗೆ ಅಡರಿದ್ದು ಲ್ಯಾವೆಂಡರ್ ಘಮ. ನಿಶ್ಶಬ್ದವಾದ ರಾತ್ರಿಯಲ್ಲಿ ಮೆಲ್ಲನೆ ತಿರುಗುವ ಫ್ಯಾನ್. ಒಂದು ಕಣ್ಣು ಮಿಟುಕಿಸಿದಂತೆ ಉರಿಯುತ್ತಿರುವ ಗುಡ್ ನೈಟು ಅದರ ನಡುವೆ ಈ ಲ್ಯಾವೆಂಡರ್ ಸುವಾಸನೆ. ಇದೆಲ್ಲಿಂದ ಘಂ ಅನ್ನಿಸಿತು ಎಂದು ನೋಡಿದಾಗ ರೂಂ ಫ್ರೆಶ್ನರ್ ಪಾಕೆಟ್, ಬೆಡ್ ಪಕ್ಕ ಬಿದ್ದಿತ್ತು. ಅದೆನ್ನೆತ್ತಿ ಅದಿಡುವ ಸ್ಥಳದಲ್ಲಿ ನೇತು ಹಾಕಿ ಮತ್ತೆ ಮಲಗಲು ಪ್ರಯತ್ನಿಸಿದೆ. ಊಹೂಂ ಎಲ್ಲಿ ಬರುತ್ತೆ ನಿದ್ದೆ? ಅಂದ ಹಾಗೆ ಪರಿಮಳಕ್ಕೂ ನನಗೂ ಬಾರೀ ನಂಟು. ಪಿಜಿಯಲ್ಲಿದ್ದಾಗ ನಾಲ್ಕನೇ ಫ್ಲೋರಿನ ರೂಮಿನಿಂದಲೇ ಬೆಳಗ್ಗಿನ ತಿಂಡಿ ಏನು ಎಂಬುದನ್ನು ಅರಿಯುತ್ತಿದ್ದ ಚುರುಕು ಮೂಗು. ನಮ್ಮಮ್ಮನಿಗೂ ಹಾಗೆಯೇ ಮೂಗಿಗೆ ಸ್ಮೆಲ್ ಬಡಿಯುವುದು ಬಾರೀ ಬೇಗ. ಅಮ್ಮ ಸ್ಮೆಲ್ ನೋಡಿಯೇ ಅಡುಗೆ ಚೆನ್ನಾಗಿದೆಯೋ ಇಲ್ಲವೋ, ಯಾವ ಪದಾರ್ಥ ಜಾಸ್ತಿ ಆಗಿದೆ ಎಂಬುದನ್ನು ಹೇಳಿ ಬಿಡುತ್ತಿದ್ದರು. ಅಡುಗೆಯಲ್ಲಿ ಏನು ಹೆಚ್ಚು ಕಮ್ಮಿ ಆಗಿದೆ ಎಂದು ರುಚಿ ನೋಡದೇ ಬರೀ ಸ್ಮೆಲ್ ನಿಂದಲೇ ಪತ್ತೆ ಹಚ್ಚುವಂಥಾ ಸಾಮರ್ಥ್ಯ ನನ್ನ ಮೂಗಿಗೆ ಇಲ್ಲವಾದರೂ ಪರಿಮಳದ ವಿಷಯದಲ್ಲಿ ತುಸು ಪ್ರೀತಿ ಜಾಸ್ತಿ ನನಗೆ.