Posts

ಅಮ್ಮನ ಒಲವಿನ ಓಲೆ.....

ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್ಟೆಲ್‌ನಲ್ಲಿಯೇ ಇರಬೇಕಾದ ಪರಿಸ್ಥಿತಿ. ವಾರದಲ್ಲಿ ಸಿಗುವ ಒಂದೇ ಒಂದು ದಿನ ರಜಾದಿನ ಹಾಸ್ಟೆಲ್‌ನ ರೂಮಿನಲ್ಲಿ ಕಳೆಯುವಾಗ ಯಾಕೋ "ಏಕಾಂಗಿತನ" ನನ್ನನ್ನು ಆವರಿಸುತ್ತದೆ. ಸಾಧಾರಣ ಹುಡುಗಿಯರಂತೆ ಶಾಪಿಂಗ್, ಔಟಿಂಗ್ ಇಷ್ಟವಿಲ್ಲದ ನನಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ, ಅನ್ಯಭಾಷೀಯರ ಪರಿಸರದಲ್ಲಿ ಪುಸ್ತಕಗಳೇ ಉತ್ತಮ ಸಂಗಾತಿಯಾಗಿವೆ. ಹಾಸ್ಟೆಲ್‌ನ ಕಿಟಿಕಿಯಿಂದ ಹೊರಗಿಣುಕಿದರೆ ತುಂತುರು ಮಳೆಹನಿಗಳು ಮರದೆಲೆಯಿಂದ ಜಾರುತ್ತಿತ್ತು. ಕೈಗೆತ್ತಿದ ಪುಸ್ತಕವೂ ಓದಬೇಕೆಂಬ ಮೂಡ್ ಇರಲಿಲ್ಲ. ಆದಾಗಲೇ ನನ್ನ ಕಣ್ಣಿಗೆ ಬಿದ್ದದ್ದು ಕಂದು ಬಣ್ಣದ ಕವರ್. ಅದು ತುಂಬಾ ಅಮೂಲ್ಯವಾದದ್ದು. ಯಾಕೆ ಗೊತ್ತಾ? ಅದರಲ್ಲಿ ತುಂಬಾ ಸಿಹಿಮುತ್ತುಗಳಿವೆ, ವಾತ್ಸಲ್ಯವಿದೆ. ಸ್ನೇಹ, ಸಲಹೆ, ಮಮತೆ, ಕಾಳಜಿ ತುಂಬಿದ ಪತ್ರ ಅದು. ಈ ಚುಮುಚುಮು ಚಳಿಯಲ್ಲಿ ಕಂದು ಬಣ್ಣದ ಕವರ್‌ನೊಳಗೆ ನನ್ನ "ಅಮ್ಮನ ಪತ್ರ" ಬೆಚ್ಚನೆ ಕುಳಿತುಕೊಂಡಿದೆ. ಅದು ಕೈಗೆತ್ತಿಕೊಂಡ ಕೂಡಲೇ ಯಾಕೋ ಮನಸ್ಸು ನಿರಾಳವಾಗುತ್ತಿದೆ. ಭಗವಾನ್ ಶ್ರೀಕೃಷ್ಣ ಯುದ್ದ ಭೂಮಿಯಲ್ಲಿ ಕುಸಿದು ಕುಳಿತ ಅರ್ಜುನನಿಗೆ ಗೀತೋಪದೇಶ ನೀಡಿ ಹುರುಪು ಹುಟ್ಟಿಸಿದಂತ...

ವಾಸ್ತವ

ಮುಂಜಾನೆ ಮಿಂದು ದೇವರಿಗೆ ನಮಿಸುವಾಗ ಅಮ್ಮ ಹೇಳುತ್ತಿದ್ದಳಾಗ, ಕೈ ಮುಗಿದು ಕಣ್ಮುಚ್ಚಿ ಬೇಡಿದರೆ ಈಶ ಒಲಿವನೆಂದು.. ಸಂಧ್ಯಾವಂದನೆ ವೇಳೆ ದೀಪ ಉರಿಸಿ ನನ್ನ ಅಜ್ಜಿ ರಾಮನಾಮ ಜಪಿಸುತಿರಲು ಕಣ್ಣೆರಡು ಮುಚ್ಚಿ ನಾನೂ ದನಿಗೂಡಿಸುತ್ತಿದ್ದೆ.. ಇರುಳ ಬಾನಂಗಳದಲ್ಲಿ ಕೋಟಿ ತಾರೆಗಳು ಮಿನುಗುವಾಗ ನಿದ್ದೆ ಬರುತ್ತಿಲ್ಲ ತಾತ, ಕತೆ ಹೇಳೆಂದು ಸತಾಯಿಸಿದಾಗ ಸುಮ್ಮನೆ ಕಣ್ಣು ಮುಚ್ಚಿರು ನಿದ್ದೆ ತಂತಾನೆ ಬರುವುದು ಎಂದು ಅಪ್ಪ ಗದರಿಸಿದಾಗ ಕಣ್ಣೆರಡು ಮುಚ್ಚಿ ಮಗ್ಗಲೆಳೆದು ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ ಬಾಲ್ಯವೆಷ್ಟು ಮಧುರವಾಗಿತ್ತು! ಕಣ್ತೆರೆದರೆ ಸುಂದರ ಲೋಕ ಮುಚ್ಚಿದರೆ ಸ್ವಪ್ನ ಲೋಕಕ್ಕೆ ಪಯಣ ಬೆಳೆಸುತಲಿದ್ದೆ ಕಾಲ ಚಕ್ರವು ತಿರುಗುತಿರಲು ಪ್ರಸ್ತುತಕ್ಕೆ ಮೊದಲ ಹೆಜ್ಜೆಯಿಟ್ಟು, ಸುತ್ತ ಕಣ್ಣು ಹಾಯಿಸಿದರೆ... ಹಗೆ ಹೊಗೆಯಾಡುವ ಜಗದಲ್ಲಿ ನಗೆ ಮಾಸಿದ ಜೋಲು ಮುಖ! ಜೀವ ತೆಗೆಯಲು ಕತ್ತಿ ಮಸೆಯುವ ಜನ, ಇನ್ನೊಂದೆಡೆ, ಜೀವಕ್ಕಾಗಿ ಬೇಡುವ ಮನ ಹಣದಾಸೆಗಾಗಿ ಜೀವ ಹಿಂಡುವವರು, ಬೇಡುವವರು, ಮುಂದೆ ಕೈ ಚಾಚಿ ಜಗದಳುವಿನ ಮುಂದೆ ನಿಸ್ಸಹಾಯಕ,ಮೂಕಪ್ರೇಕ್ಷಕ ನಾನು ಹಿಂಸೆಗಳು ಕಣ್ಮುಂದೆ ನರ್ತನವಾಡಿದರೂ ನಾ ಬಂಧಿ, ಕಟ್ಟುಪಾಡುಗಳ ಸೆರೆಮನೆಯಲ್ಲಿ ದನಿಯೆತ್ತಲು ಚಡಪಡಿಸಿ ಸೋತಾಗ ಎರಡು ಹನಿ ಕಣ್ಣೀರೆರೆದು ಮತ್ತೆ, ನನಗಿದರ ಅರಿವೇ ಇಲ್ಲದವನಂತೆ ಕಣ್ಣು ಮುಚ್ಚಿಕೊಳ್ಳುತ್ತೇನೆ!

ದ್ವಂದ್ವ

ನಿರೀಕ್ಷೆಗಳೇ… ನನ್ನ ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ? ಅತೃಪ್ತ ಜೀವನದಿ ತೃಪ್ತಿಯ ಕೃತಕ ನಗುವನು ಚೆಲ್ಲಿ ಮುಸುಕೆಳೆದು ಮಲಗಿದರೂ ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು? ಪ್ರತೀಕ್ಷೆಗಳೇ….. ಬರಡು ಜೀವನವೆಂದು ಬಿಕ್ಕಿ, ಕಣ್ಣ ಹನಿ ಉಕ್ಕಿದಾಗ ಭೂತಕಾಲದ ನಗುವ ಸೆಲೆಯನು ವರ್ತಮಾನದ ತೀರಗಳಿಗಪ್ಪಳಿಸಿ ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ? ಪರೀಕ್ಷೆಗಳೇ… ನಾಲ್ಕು ದಿನದ ಜೀವನವು ಬೇವು ಬೆಲ್ಲ, ಹಾವು ಹೂವಿನ ಹಾದರವು ಇದುವೆಂದು ಕಲಿಸುವ ಗುರುಗಳೇ.. ದಿನವೂ ಬರುವಿರಿ ಕ್ಷಣ ಕ್ಷಣದ ಹೆಜ್ಜೆಯಲಿ ಗುರುತ ಮೂಡಿಸಿ ಮತ್ತೊಮ್ಮೆ ಛೇಡಿಸಿ, ಜೀವನದ ನಕ್ಷೆಯಲಿ ಮೈಲಿಗಲ್ಲುಗಳಂತೆ ಹುಟ್ಟುಹಾಕುವಿರಿ ಅನುಭವದ ಒರತೆಯನು ಕಟ್ಟಿ ಹಾಕುವಿರಿ ಪ್ರೀತಿ-ದ್ವೇಷದ ಸರಪಳಿಯಲ್ಲಿ ಜೀವನವ ತೇಯ್ದು ತೆವಳುವಾಗ… ಇದನೇನೆಂದು ಕೊಳ್ಳಲಿ ಶಿಕ್ಷೆಯೇ? ಅಥವಾ ಬದುಕಲಿರುವ ಅಪೇಕ್ಷೆಯೇ???

ನಾನು- ನೀನು

ನಿನಗೆ, ನನ್ನೊಳಗಿನ ಪ್ರೀತಿ ಕಾಣುವುದಿಲ್ಲ ಭೂತ ಕನ್ನಡಿ ಹಿಡಿದು ಹುಡುಕಿದಾಗಲೂ ನನ್ನ ದನಿ ಕೇಳುವುದಿಲ್ಲ ಗಂಟಲು ಬಿರಿದು ನಾನೆಷ್ಟು ಕರೆದರೂ ಮೌನ ಆವರಿಸಿದೆ ಸುತ್ತ ಬರಡು ಜೀವನವೆಂಬ ವ್ಯಥೆಯಲಿ ಕ(ವಿ)ತೆಗಳಿಗೆ ಬರಗಾಲ ಬಂದಿದೆ, ಕೈ ಬಂಧಿ ತೊಡಿಸಿದಾಗ ಮನದಲ್ಲಿ ಬೆಂಕಿ ಉರಿದು ಉಕ್ಕುವವು ಕಣ್ಣ ಹನಿ ಕೊರಗಿ ಕರಗುವ ಚಿತ್ತದಲಿ ಜ್ವಾಲಾಮುಖಿಗಳಂತೆ! ಮತ್ತೊಮ್ಮೆ ಭರವಸೆಯ ಆಗಸದಿ ಭವಿಷ್ಯದ ಹೊಂಗನಸ ಬಿಳಿ ಮೇಘ ವರ್ಷಧಾರೆಯೆರೆದಾಗ ಕನಸ ದೋಣಿಯಲಿ ಸಾಗುವ ಈ ಬಾಳ ಪಯಣ ಪ್ರಕ್ಷುಬ್ದ ಬದುಕಿನಲಿ ನಿನ್ನ ನೆರಳಾಗಿ, ಇನಿಯಾ ಕನಸ ಮಗ್ಗುಲ ಸರಿಸಿ ಕವಲೊಡೆದ ಓಣಿಯಲಿ ಮೆಲ್ಲ ಹೆಜ್ಜೆಯನ್ನಿಡುವಾಗ... ಗಜ್ಜೆ ದನಿಗಳ ಕಂಪು ನಿನ್ನೊಡಲ ಸೇರಿ ದುಗುಡಗಳ ದನಿಯಾಗಿ ಮಾರ್ದನಿಸುವುದೇಕೆ?

ಬದುಕು ಪಯಣ

ಮನೆ ಮುಂದಿನ ಹಾದಿ ಬದಿಯಲಿ ಕೇಕೆ ಹಾಕಿ, ಗೋಲಿಯಾಡುವಾಗ ಹಾಲಿರದ ಎದೆಗಂಟಿದ ಅಳುವ ಕಂದನ ದನಿಗೆ ನಾನೆಂದೂ ಕಿವಿಕೊಟ್ಟಿಲ್ಲ ಕಪ್ಪು ಕನ್ನಡಕ ಧರಿಸಿ, ಮನದಲ್ಲಿ ಅಹಂಕಾರ ತುಂಬಿರಲು ಭಿಕ್ಷೆ ಬೇಡುವ ಮುದ್ದು ಕೈಗಳ ಕಂಡು ಕತ್ತು ತಿರುಗಿಸಿ, ಸುಮ್ನೆ ಜೇಬು ತಡಕಾಡಿದ್ದೂ ಇದೆ ದಾರಿಯಿಕ್ಕೆಲಗಳಲಿ ಕೈ ಚಾಚುವ ಜನರು, ಕಸದ ತೊಟ್ಟಿಯಿಂದ ಕೂಳು ಹೆಕ್ಕಲು ನಾಯಿ, ದನಗಳನ್ನೋಡಿಸುವ ಮನುಜನ ನೋಡಿ ಕೋಲಾ ಕುಡಿದು ತೇಗು ಬಿಟ್ಟಿದ್ದೆ! ಗತ್ತು ಹೊತ್ತಿನಲಿ ಪಯಣ ಬೆಳೆಸುವಾಗ ಕಳ್ಳ ನಿದ್ದೆಯಾವರಿಸಿ, ಸೀಟು ಕಸಿದಿದ್ದೆ, ನಡುಕದಿಂದ ತಾತ ನನ್ನ ಪಕ್ಕ ಸರಿದಾಗ, ಟೈ ಬಿಗಿದು ಕೈ ಕಟ್ಟಿ ಕುಳಿತು, ಹಾಡು ಕೇಳಿದ್ದೆ ಬಾಳ ಪಯಣದಲಿ ತಿಂದು ಬೀಗುತ ಬಣ್ಣ ಬಣ್ಣದ ಬದುಕಿನಲಿ ತೇಲಾಡಿ ಒದ್ದೆ, ಕೊನೆಗೆ ಆಯಾಸದಲಿ ಎಡವಿ ಬಿದ್ದೆ ತುಳಿದರನೆನು ಜನ, ಹಣೆಗೆ ಕೈಯನು ಜಜ್ಜಿ ತಲೆ ಕೂದಲು ಉದುರಿವೆ, ಎಲ್ಲವೂ ಹಣ್ಣು ಹಣ್ಣು ಕಣ್ಣು ಮಂಜಾಗಿವೆ, ಇಲ್ಲ ನಿದ್ದೆ, ನೀರಡಿಕೆ ಬದುಕ ಬಂಜರು ಬಯಲಲಿ ಒಂಟಿ ಕಲ್ಲು ಕೈ ನಡುಗುತಿವೆ, ದೇಹ ಕಂಪಿಸುತಿದೆ ಒಣ ಬೀಡಿಯ ಧೂಮದಲಿ ಉಸಿರುಗಟ್ಟುತಿರುವಾಗ ತಡಕಾಡಿದೆ ಅಂಗಿಯ ಮೂಲೆ ಮೂಲೆಗಳಲ್ಲಿ ಅದಾಗಲೇ ನಿಜವರಿತದ್ದು, ಆಸೆಗಳ ಓಟದಲಿ ನಾನು ಜೇಬು ಹೊಲಿಸಿರಲಿಲ್ಲವೆಂದು!

ಅಲೆಮಾರಿ ಬದುಕು

ಕನಸುಗಳ ಮರಳದಂಡೆಯಲಿ ನೋವ ಹೊತ್ತು ನಡೆವೆವು ಬೆನ್ನಿಗಂಟಿದ ಹೊಟ್ಟೆ, ಅಳುವ ಕೂಸು ಹೊತ್ತು, ಇನ್ನೊಂದು ಮೂಟೆ ರಟ್ಟೆಯಲಿ ವೇದನೆಯ ಗಂಟು ಅಲ್ಲ ಇದು, ಜೀವನದ ಕುಂಟುಗಳಿವು ಪ್ರಕ್ಷುಬ್ಧ ಬದುಕಿನ ಭಗ್ನ ಕನವರಿಕೆ ಅಲೆಮಾರಿಗಳು ನಾವು, ಬದುಕ ಅಲೆ ಸುಳಿಗೆ ಸಿಕ್ಕಿದರೂ ತುಂಡು ರೊಟ್ಟಿ, ಹೊತ್ತು ಕೂಳಿಗಾಗಿ ಸಾಗುವೆವು ಇನ್ನೂ ಮುಂದೆ ಮುಂದೆ ಬರಿಗಾಲ ಪಾದ ಒಡೆದು ರಕ್ತ ಚಿಮ್ಮುತಿರೆ ಬೆವರ ಹನಿ ಮಾಲೆಗಳು ಎದೆ ನಡುವೆ ಹರಿದು ಹೊಕ್ಕಳ ಬಳ್ಳಿಯಲ್ಲಿ ತಂಗಿ ಮತ್ತೂ ಹರಿದಾಗ ಎದೆಗೂಡಿನೊಳು ಚಿಗುರೊಡೆದ ನೆನಪುಗಳ ಒರೆಸಿಟ್ಟ ಮುಗ್ದ ಬೆರಳು ಬೆಳಕು ಸಾಯುವ ಮುನ್ನ ಬೀಡು ಸೇರುವ ತವಕ, ಗೆಜ್ಜೆ ದನಿಗಳ ನಡುವೆ ಸರಿದ ನೆರಳು ಹೃದಯದಲಿ ಅದುಮಿಟ್ಟ ನೋವಿನಾ ಸೆಲೆಯು ಹಾಡಾಗಿ ಉಕ್ಕಿ ಕಪ್ಪು ತುಟಿಗಳಲಿ ಉಸಿರ ಬಿಗಿ ಹಿಡಿದು ಬಿಕ್ಕಿ ಅತ್ತಾಗ, ಬಾಹು ಬಲವಿಲ್ಲದೆ ಬಾಹುಬಲಿಗಳಾದೆವು ಒಂದೆಡೆ ಇನ್ನೊಂದೆಡೆ ಭವಿಷ್ಯ ನುಡಿಯುವ ಮಂಡ ಕಪ್ಪೆಗಳಾಗಿ ಸುಖದ ರೂಪದ ಬಯಕೆ ದುಃಖದಲಿ ದಿನರಾತ್ರಿ ಹದವಾಗಿ ಹರಿಯುತಿರೆ ಗುರಿಯಿರದ ದಾರಿಯೊಳು ತೆವಳುವೆವು ನಿಡುಸುಯ್ವ ಕ್ಷಿತಿಜದಂಚಿಗೆ.

ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?

ಮಹಿಳೆಯರ ಮೇಲಿನ ದಬ್ಬಾಳಿಕೆ ಶೋಷಣೆ ಇಂದು ನಿನ್ನೆಯ ಕಥೆಯಲ್ಲ. ಮನೆಯಲ್ಲಾದರೂ, ಕಚೇರಿಯಲ್ಲಾದರೂ ಶೋಷಣೆಗೆ ಒಳಪಡುವವಳು ಮಹಿಳೆಯೇ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಶೋಷಣೆ ನಡೆಸುತ್ತಾ ಬಂದಿರುವ ಪುರುಷ ಪ್ರಧಾನ ಸಮಾಜವು ಶೋಷಣೆಗೊಳಗಾದ ಮಹಿಳೆಯನ್ನು ಯಾವ ರೀತಿ ಸ್ವೀಕರಿಸಿದೆ ಎಂಬುದು ಚಿಂತಿಸಬೇಕಾದ ವಿಷಯ. ಯಾವುದೇ ರೀತಿಯಲ್ಲಿಯೂ ಮಹಿಳೆ ಶೋಷಣೆಗೊಳಗಾದರೆ, ಅದರಲ್ಲೂ ದೈಹಿಕ ಶೋಷಣೆಗೊಳಗಾದರೆ ಸಮಾಜವು ಅವಳ ಜೊತೆ ಹೇಗೆ ವರ್ತಿಸುತ್ತದೆ ಎಂಬುದು ಇಲ್ಲಿ ಪ್ರಧಾನವಾದುದು. ಹೆಣ್ಣಿನ ದೈಹಿಕ ಸುಖ ಬಯಸುವ ಪುರುಷ ವರ್ಗ ಯಾವ ಸಂದರ್ಭದಲ್ಲೂ ಬೇಕಾದರೂ ಮಹಿಳೆಯ ಮೇಲೆ ಅತ್ಯಾಚಾರ ನಡೆಸಬಹುದು. ಹಾಡಹಗಲೇ ಅದೆಷ್ಟೋ ಹೆಣ್ಣು ಮಕ್ಕಳು ಕಾಮದ ಬಲೆಗೆ ಬಿದ್ದು ನರಳುತ್ತಿರುವಾಗ ಇನ್ನು ರಾತ್ರಿ ಕಾಲದ ಬಗ್ಗೆ ಹೇಳುವುದೇನಿದೆ? ಹೆಣ್ಣು ಒಂಟಿ ಎಂದು ಅನಿಸಿದಾಕ್ಷಣ ಕಾಮಣ್ಣರ ಕಣ್ಣಿಗೆ ಗುರಿಯಾಗ ತೊಡಗುವ ಮಹಿಳೆಗೆ ಒಂದೆಡೆಯಾದರೆ, ಪುರುಷ ಜೊತೆಗಿದ್ದರೂ ಕೆಲವೊಮ್ಮೆ ಇಂತಹ ದುರಂತಗಳಿಗೆ ಎಡೆಯಾಗುವ ಪರಿಸ್ಥಿತಿ ಬಂದಿದೆ. ಉದಾಹರಣೆಗೆ ಪ್ರಸ್ತುತ ಹೊಸ ವರ್ಷ ದಿನಾಚರಣೆ ವೇಳೆ ಮುಂಬೈಯಲ್ಲಿ ನಡೆದ ಘಟನೆಯನ್ನೇ ನೆನಪಿಸಿಕೊಳ್ಳಿ. ಹೆಣ್ಣು ಎಷ್ಟು ಸುರಕ್ಷಿತಳು ಎಂದು ಇದರಿಂದ ತಿಳಿಯುತ್ತದೆ. ಬರೀ ಪ್ರಾಯಕ್ಕೆ ಬಂದ ಹೆಣ್ಣು ಮಾತ್ರವಲ್ಲ ದಿನೇ ದಿನೇ ಹೆಣ್ಣು ಹಸುಗೂಸಿನಿಂದ ಹಿಡಿದು ವೃದ್ಧೆಯರ ವರೆಗೆ ಇಂದು ಮಾನಭಂಗಗಳು ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕುವವರು ಯಾರು? ಅತ್...