Posts

ಅಪ್ಪನ ಡೈರಿಯಿಂದ ಕದ್ದ ಪುಟ...

Image
ಈವಾಗ ಹೇಗೆ ಸಮಯ ಕಳೆಯುತ್ತಿದ್ದೀರಿ? ಕೆಲಸದಿಂದ ನಿವೃತ್ತಿ ಹೊಂದಿದ ನಂತರ ಎಷ್ಟೋ ಜನ ಇದೇ ಪ್ರಶ್ನೆಯನ್ನು ಅದೆಷ್ಟು ಬಾರಿ ಕೇಳಿದ್ದಾರೇನೋ ಗೊತ್ತಿಲ್ಲ. ಹಳ್ಳಿಯಲ್ಲಿರುವ ಕಾರಣ ಹಿತ್ತಿಲಲ್ಲಿ ಒಮ್ಮೆ ಸುತ್ತಾಡಿ, ದನ ಕರು, ಗಿಡ, ಮರ ಎಲ್ಲವನ್ನೂ ನೋಡ್ಕೋಳೋದು, ಇನ್ನೇನೋ ವಸ್ತು ತರೋಕೆ ಅಂತಾ ಅಂಗಡಿಗೆ ಹೋಗಿ ಬರೋದು, ಎರಡ್ಮೂರು ದಿನಪತ್ರಿಕೆ ಓದೋದು, ಆಮೇಲೆ ಟೀವಿ ನೋಡ್ತಾ ಕುಳಿತರೆ ದಿನ ಕಳೆದು ಹೋಗುವುದೇ ಗೊತ್ತಾಗಲ್ಲ. ಈವಾಗಂತೂ ವಿಶ್ವಕಪ್ ಫುಟ್ಬಾಲ್ ಇದೆ ಅಲ್ವಾ? ನಿದ್ದೆ ಬರುವಷ್ಟು ಹೊತ್ತು ಟೀವಿ ನೋಡ್ಬಹುದು. ಇಷ್ಟೊಂದು ವರ್ಷ ಸ್ವಂತ ಕೆಲಸದಲ್ಲಿ ಬ್ಯುಸಿಯಾಗಿದ್ದ ನನಗೆ ನಿವೃತ್ತಿ ನಂತರ ಮನೆಯಲ್ಲಿ ಸುಮ್ಮನೆ ಕೂರೋದು ಅಂದ್ರೆ ಕಿರಿಕಿರಿ. ಅದಕ್ಕೆ ಮನೆಯ ಹೊರಗೆ ಸುತ್ತಾಡ್ತಾ ಇರ್ತೀನಿ. ಅಪ್ಪಾ ಟೈಮ್ ಸಿಕ್ಕಾಗಲೆಲ್ಲಾ ಏನಾದ್ರೂ ಬರೀರಿ ಅಂತಾ ಮಗಳು ಹೇಳ್ತಾನೇ ಇರ್ತಾಳೆ. ನಾನು ನಕ್ಕು ಸುಮ್ಮನಾಗ್ತೀನಿ .ನಿಜವಾಗ್ಲೂ, ನನಗೆ ಬರೆಯೋಕೆ ಬರಲ್ಲ. ಬರೆದದ್ದನ್ನು ಓದೋದು ಇಷ್ಟ. ಹೂಂ..ಇವತ್ತು ಏನಾದ್ರೂ ಬರೆಯೋಣ ಅಂತಾ ಪ್ರಯತ್ನ ಮಾಡಿದೆ. ಏನು ಬರೆಯಲಿ? ಅಂತಾ ಯೋಚಿಸ್ತಾ ಕುಳಿತುಕೊಂಡು ಒಂದು ಗಂಟೆ ಹಾಳು ಮಾಡಿಬಿಟ್ಟೆ! ಮನಸ್ಸಲ್ಲಿರೋದನ್ನೇಲ್ಲಾ ಖಾಲಿ ಹಾಳೆಯಲ್ಲಿ ಗೀಚಿದರೆ ಮನಸ್ಸು ನಿರಾಳವಾಗುತ್ತೆ ಅಂತಾ ನನ್ನವಳು ಆಗಾಗ್ಗೆ ಹೇಳ್ತಾನೇ ಇರ್ತಾಳೆ. ಅವಳ ಮನಸ್ಸನ್ನು ಕಾಡುವ ಯಾವುದೇ ವಿಷಯ ಇರಲಿ ಅದನ್ನು ಹಾಳೆಯಲ್ಲಿ ಗೀಚಿದರೆ ಮಾತ್ರ ಆಕೆ...

ಈ ಕ್ಷಣದ ಮೌನ

Image
ನೀ ನನ್ನೊಂದಿಗೆ ಮಾತು ಬಿಟ್ಟ ಕ್ಷಣ ಮೌನದಲಿ ಮಾತು ಮೊಳಕೆಯೊಡೆದಿತ್ತು ನಾವಿಬ್ಬರೂ ಹೆಚ್ಚು ಮಾತನಾಡಿದ್ದೂ ಈ ಮೌನದಲ್ಲೇ... ಆರೋಹಣ ಅವರೋಹಣದ ನಿಟ್ಟುಸಿರ ಸಂಜೆಗಳಲಿ ಬಯ್ಯ ಮಲ್ಲಿಗೆ ಬಿರಿಯುವಾಗ ನೀನದನ್ನು ವಸಂತವೆಂದು ಕರೆದೆ ನನ್ನ ಪ್ರೀತಿಯ ಸೆಳೆತವನ್ನು ನದಿಗೆ ಹೋಲಿಸುವಾಗ ನೀನು ಪ್ರಶಾಂತ ಸಾಗರವಾಗಿದ್ದೆ... ದಿಗಂತದಲಿ ಹಾರಾಡುವ ಹಕ್ಕಿಗೂ ನೀರಲ್ಲಿ ತೇಲುವ ಮೀನಿಗೂ ಇದೆ ಬಂಧನದ ಭಯ! ಪ್ರೀತಿಯ ಬಾಹುಗಳಲ್ಲಿ ಕಣ್ಮುಚ್ಚಿ ಬಂಧಿಯಾಗುವ ಹೊತ್ತು ಸೇರಿಕೊಳ್ಳುವ ತವಕದ ಹಿಂದೆ ಕಳೆದುಕೊಳ್ಳುವ ಭೀತಿ ಮುಖವಾಡ ಧರಿಸಿ ನಕ್ಕಾಗ ಮಾತು-ಮೌನದ ನಡುವೆ ಪ್ರೀತಿ ಬಿಕ್ಕಳಿಸಿದ್ದು ಕೊನೆಗೂ ಕೇಳಲೇ ಇಲ್ಲ

ಪ್ರೀತಿ ಎಂದರೆ? ಆಫ್ಟರ್ ಶೇವ್ ಲೋಷನ್ನಂತೆ

Image
ಪ್ರೀತಿ ಎಂದರೆ? After shave lotionನಂತೆ ಎಂದು ಹೇಳಿ ಅವನು ಪಕಪಕ ನಗುತ್ತಿದ್ದ. ಅವನನ್ನೇ ದುರುಗುಟ್ಟಿ ನೋಡಿದೆ. ಕ್ಲೀನ್ ಶೇವ್ ಮಾಡಿದ್ದ ಅವನ ನುಣುಪಾದ ಕೆನ್ನೆಯಲ್ಲಿ ಹಸಿರು ಚುಕ್ಕಿಯಂತಿರುವ ಚಿಗುರು ಗಡ್ಡ ಇನ್ನೂ ಮುದ್ದಾಗಿ ಕಾಣುತ್ತಿತ್ತು. ನಾನು ಸೀರಿಯಸ್ಸಾಗಿ ಕೇಳಿದ್ದು ... ನಾನು ಸೀರಿಯಸ್ಸಾಗಿಯೇ ಹೇಳಿದ್ದು... ನಿನ್ನ ಜತೆ ವಾದ ಮಾಡಲ್ಲ ಪೆದ್ದಿ ನೀನು... ಹೌದು... ನಾನು ಪೆದ್ದಿ...ನನಗೇನೂ ಗೊತ್ತಿಲ್ಲ...ನಾನೀವಾಗ ಮಾಡುತ್ತಿರುವುದು ಸರಿಯೋ ತಪ್ಪೋ ಯಾವುದೂ ಗೊತ್ತಿಲ್ಲ ಫೇಸ್ಬುಕ್ನಲ್ಲಿ Feeling Confused ಅನ್ನೋ ಸ್ಟೇಟಸ್ ಹಾಕಿ ಬಿಡಲಾ? ಛೇ...ಬೇಡ... ಅವನ ಜತೆ ಮಾತನಾಡಿದಾಗ ನನಗ್ಯಾಕೆ ಅಷ್ಟು ಸಮಾಧಾನವಾಗುತ್ತದೆ? ಅವನ ಸೆನ್ಸ್ ಆಫ್ ಹ್ಯೂಮರ್, ಸಿಂಪ್ಲಿಸಿಟಿಗೆ ನಾನು ಫಿದಾ ಆಗಿಬಿಟ್ಟಿದ್ದೇನೆ. ಅವನ ಮಾತು, ಮೌನ, ನಗು ಎಲ್ಲವೂ ಇಷ್ಟವಾಗತೊಡಗಿದೆ. ನನ್ನಂತೆಯೇ ಅದೆಷ್ಟು ಹುಡ್ಗೀರು ಅವನ ಬಗ್ಗೆ ಕನಸು ಕಾಣುತ್ತಿದ್ದಾರೋ ಏನೋ. ಹುಡ್ಗೀರನ್ನೇ ಮೋಡಿ ಮಾಡೋಕೆ ಹುಟ್ಟಿದ್ದಾನೆ ಅನ್ನೋ ಹಾಗಿದೆ ಅವನ ಪರ್ಸನಾಲಿಟಿ... ರಾತ್ರಿ 11.30ರ ನಂತರ ಹಾಸ್ಟೆಲ್ ರೂಂನಲ್ಲಿ ಕುಳಿತು ರೂಂಮೇಟ್ಸ್ ಜತೆ ಪಟ್ಟಾಂಗ ಹೊಡೆಯುವಾಗ ಅವನ ಬಗ್ಗೆ ಹೇಳಿದ್ದೆ. ನನ್ನ ಮನಸ್ಸಲ್ಲಿ ಏನೆಲ್ಲಾ ಇತ್ತೋ ಎಲ್ಲವನ್ನೂ ನಾನ್ಸ್ಟಾಪ್ ಆಗಿ ಹೇಳಿದ ನಂತರ ತಿಳೀತು ಇಷ್ಟೆಲ್ಲಾ ಹೇಳಬಾರದಿತ್ತು ಅಂತ... ಯೇ ತೋ ಪಾಗಲ್ ಹೋಗಯಿ! ನನ್ನ ಮಾತ...

ದೇವರಿದ್ದಾನೆ!

Image
ಅಮ್ಮಾ ಈ ಎಳನೀರಲ್ಲಿ ನೀರು ಹೇಗೆ ಬಂತು ಎಂದು ಕೇಳುವ ಕೂಸು ಅಗರಬತ್ತಿಯ ಪರಿಮಳದಲ್ಲಿ ಉತ್ತರ ಕಂಡು ಕೊಂಡಿತ್ತು... ದೇವರಿದ್ದಾನೆ! ನೀ ನೋಡಿದ್ದೀಯಾ? ಕೇಳಿದ್ದಳು ಗೆಳತಿ.. ಹೂಂ ನೋಡಿದ್ದೇನೆ ಕಣೇ.. ಖಾಲಿ ಹೊಟ್ಟೆಯಲ್ಲಿ ಮಲಗಿರುವಾಗ ಸಿಕ್ಕ ಬ್ರೆಡ್ಡು ತುಂಡುಗಳಲ್ಲಿ ಜೇಬು ಖಾಲಿಯಾಗಿರುವಾಗ ಪ್ರತಿಫಲ ಬಯಸದೆ ಯಾರೋ ಕೊಟ್ಟ ದುಡ್ಡಲ್ಲಿ ನಾನವನ ಕಂಡಿದ್ದೆ ಮೊನ್ನೆ ಮತ್ತೆ ಸಿಕ್ಕಿದ ಕಣೇ ಕಣ್ಣೀರು ಸುರಿಸಿ ನಡೆಯುವಾಗ ನೋಡಿ ನಕ್ಕಿದ್ದ ದುರುಗುಟ್ಟಿ ನೋಡಿದೆ ನಾನಿದ್ದೀನಿ ಎಂದು ಹೇಳಿದ ಎಲ್ಲಿ ಎಂದು ಕೇಳಿಯೇ ಬಿಟ್ಟೆ ನಿನ್ನಲ್ಲಿ ಎಂದು ಬಿಡುವುದೆ?

ಗಾಂಧಿ ಬಾ...

Image
ಮೂರು ದಾರಿ ಸೇರುವ ಜಂಕ್ಷನ್ನಲ್ಲಿ ಕಲ್ಲಿನಲಿ ಕೆತ್ತಿದ ಪ್ರತಿಮೆಯಾಗಿ ಪ್ರತಿಭಟನೆಗೂ, ಸತ್ಯಾಗ್ರಹಕ್ಕೂ ಮೌನ ಸಾಕ್ಷಿಯಾಗಿ ನಿಂತಿರುವ ಭೈರಾಗಿ ಸರ್ಕಾರಿ ಕಚೇರಿಗಳ ಗೋಡೆಗೆ ತೂಗು ಹಾಕಿದ ಫೋಟೋಗಳಲಿ ಭ್ರಷ್ಟಾಚಾರಿಗಳ ನೋಡಿ ಮರುಗುತ್ತಾ ಲಂಚದ ನೋಟಿನ ಕಂತೆಗಳಲಿ ನಗುತಿಹನು ಗಾಂಧಿ ನೀ ಮಹಾತ್ಮ...ಅಹುದಹುದು ರಾಷ್ಟ್ರಪಿತ ಎಂದು ಕರೆದಿದ್ದರೂ ಸಂವಿಧಾನದ 18 (1) ಪರಿಚ್ಛೇದ ಪ್ರಕಾರ ಇದು ಅಸಂವಿಧಾನಿಕವಂತೆ! ನಿನ್ನ ಆತ್ಮಕತೆಯನ್ನೋದಿ ಮನದಲ್ಲೇ ಧ್ಯಾನಿಸಿದೆ ಗಾಂಧಿ ಸಿನಿಮಾದಲ್ಲಿನ ಪಾತ್ರಧಾರಿಯೇ ಕಣ್ಮುಂದೆ ಬಂದಾಗ ಕಣ್ಣು ತೆರೆದೆ... ನೀನು ಕಣ್ಮುಚ್ಚಿ ನಕ್ಕಿರಬಹುದೆ? ನಿನ್ನ ಮೇಲೆ ಆರೋಪಗಳನ್ನು ಹೊರಿಸಿ ಪತ್ರಿಕೆ, ಫೇಸುಬುಕ್, ಟ್ವೀಟರ್ ಗಳಲ್ಲಿ ಗಾಂಧಿ ಹೀಗಿದ್ದರು ಎಂದು ಜರೆಯುವಾಗ ಮನದಲ್ಲಿ ಕಸಿವಿಸಿ ನೀನದಕೆ ಉತ್ತರ ನೀಡುವಂತಿದ್ದರೆ... ಅಹಿಂಸೆಯೇ ಧರ್ಮ ಸತ್ಯವೇ ಬಲವೆಂದು ಬಾಳಿ ಬದುಕಿದ ನೀನು ಸ್ವಾತಂತ್ರ್ಯ ಸಿಕ್ಕಿದಾಗಲೂ ದೇಶ ವಿಭಜನೆಯ ನೋವಲ್ಲಿ ಸ್ವಾತಂತ್ರ್ಯದ ಸವಿಯುಣ್ಣಲಿಲ್ಲ ಕೊನೆಗೆ ಗೋಡ್ಸೆಯ ಗುಂಡೊಂದು ನಿನ್ನೆದೆಯ ಸೀಳಿದಾಗ ಹೇ ರಾಮ್ ಎಂಬ ಕೊನೆಯ ಮಾತಲ್ಲಿ ಎಲ್ಲವೂ ಹೇಳಿಬಿಟ್ಟೆ! ಹೇ...ಸಬರ್ಮತಿಯ ಸಂತ ಮತ್ತೊಮ್ಮೆ ಹುಟ್ಟಿ ಬರುವಿಯಾದರೆ ಬೇಗ ಬಾ... ಆದರೆ ಒಂದು ಕಂಡೀಷನ್ ಈ ನೆಲದಲ್ಲಿ ಕಾಲಿಡದೆ ಮನದಲ್ಲಿ ಸ್ಫೂರ್ತಿ ಸೆಲೆಯಾಗಿ ಬಾ...

ಜಾಹೀರಾತು

Image
ಸುಗಂಧ ಭರಿತ ಸೋಪುಗಳನ್ನು ಮೆಲ್ಲ ಮೆಲ್ಲನೆ ಮೈ ಮೇಲೆ ಜಾರಿಸಿ ನೊರೆಗಳನ್ನೊಮ್ಮೆ ಊದಿ ಗುಳ್ಳೆಗಳನ್ನು ಕಂಡು ನಕ್ಕು... ಅರ್ಧ ದೇಹವನ್ನು ತುಂಡು ಬಟ್ಟೆಯಲ್ಲಡಗಿಸಿ ತನಗಾಗಿ ಕಾದು ನಿಂತ ಪ್ರಿಯಕರನ ತೆಕ್ಕೆಗೆ ಬಿದ್ದು ಅವನು ಅವಳ ದೇಹ ಗಂಧದಲ್ಲಿ ತಲ್ಲೀನವಾಗುವ 2 ನಿಮಿಷದ ಜಾಹೀರಾತು ಹಸಿದ ಹೊಟ್ಟೆಯಲ್ಲಿ ನಗುವುದನ್ನೂ ಸೌಂದರ್ಯವೆಂದರೆ ದೇಹ ಮಾತ್ರವಲ್ಲ ಎಂಬುದನ್ನು ಬದುಕು ಆಕೆಗೆ ಕಲಿಸಿದಾಗ ಅವಳು ಕ್ಯಾಮೆರಾ ಮುಂದೆ ಮೀಯಲಿಲ್ಲ... ಅವಳ ದೇಹಗಂಧವನ್ನರಸಿ ಯಾರೂ ಬರಲಿಲ್ಲ!

ನದಿ

Image
ನಿನ್ನೆವರೆಗೂ ಅವಳ ಪುಟ್ಟ ಕೈಗಳಲ್ಲಿ ಸಿಕ್ಕು ಪುಟ್ಟ ಪಾದಗಳಿಗೆ ಮುತ್ತಿಕ್ಕಿ ಕಿಲಕಿಲ ನಗುವಿಗೆ ಸಾಥಿಯಾಗಿದ್ದು, ಇಂದು ಊದಿಕೊಂಡ ಅವಳ ಶವವನ್ನು ಹೊತ್ತು ದಡದಲ್ಲಿ, ಮಳೆಯಂತೆ ಕಣ್ಣೀರು ಸುರಿಸುವ ಅಮ್ಮನನ್ನೂ ಲೆಕ್ಕಿಸದೆ ಹರಿಯುತ್ತಿದೆ ನದಿ... ಇವಳು ನಾವಂದು ಕೊಂಡಂತೆ ಇಲ್ಲ ಎಂದು ಜನರಾಡಿಕೊಳ್ತಾರೆ ಆಷಾಢದಲ್ಲಿ ರಭಸವಾಗಿ ಹರಿವ ಕೋಪಿಷ್ಠೆ ಮಕರ ಮಾಸದ ಮಂಜು ಮುಸುಕಿದ ಮುಂಜಾವಿನಲಿ ಹುಸಿಕೋಪ ತರಿಸುವ ಪ್ರೇಯಸಿ ಒಡಲೊಳಗೆ ಪ್ರೇಮದ ತಾಪ ಹೊರಗೆ ತಂಪಾದ ಮೈ ಮೆಲುನಗೆಯ ಮೋನಾಲಿಸಾಳಂತೆ ಚಿತ್ರ ವಿಚಿತ್ರ ಛಾಯೆ... ಚಂದಿರನ ಬೆಳಕಲ್ಲಿ ಹಾಲುಕ್ಕಿದಂತೆ ಹರಿವ ಮತ್ತೊಮ್ಮೆ ಬಿಳಿ ದಿರಿಸು ತೊಟ್ಟ ಯಕ್ಷಿಯಂತೆ ಭಯಾನಕ ರೂಪ ಮನದೊಳಗಿರುವ ದುಃಖಗಳನ್ನು ಬದಿಗೊತ್ತಿ ಏರಿಳಿದು ಹರಿವಳು ಮೈ ಮುರಿದು ಕೈ ಚಾಚಿ ನಡುವ ಬಳುಕಿಸಿ ಲಜ್ಜೆ ಹೆಜ್ಜೆಯನ್ನಿಟ್ಟು ಸನಿಹದಲ್ಲಿದ್ದರೂ ಅದು ನನ್ನದಲ್ಲ ಎಂಬಂತೆ ಅಳುವ ದಂಡೆಯ ಮೈಗೆ ಗುದ್ದಿ, ಮುದ್ದಿಸಿ ಯಾರಿಗೂ ಅರಿವಾಗದಂತೆ ನೋವ ನುಂಗಿ ಯಾರಲ್ಲೂ ಕೋಪಿಸದೆ ಕಾಮುಕ ಹೃದಯೀ ಸಮುದ್ರದ ಸೆಳೆತಕ್ಕೆ ಸೋತು ತನ್ನನ್ನೇ ಅರ್ಪಿಸಲು ಹೊರಟು ನಿಂತಾಗ ಅವಳಲ್ಲಿ ಪ್ರೇಮವಿತ್ತು, ಪ್ರೇಮಿಯ ಸೇರುವ ತವಕ ಸವತಿಯಾಗುವೆನೆಂಬ ನೋವೂ...