Posts

ಕಾಡುವ ನೆನಪುಗಳಿಗೂ ಇದೆ ಘಮ

Image
  ರಜೆ ಇದ್ದಾಗಲೆಲ್ಲ ಹೀಗೆಯೇ..ಅದೆಷ್ಟು ಪ್ರಯತ್ನಿಸಿದರೂ ನಿದ್ದೆ ಬರುವುದಿಲ್ಲ. ಆಫೀಸಿಗೆ ಹೋಗದೇ ಇರುವ ದಿನ  ಬೇಡವೆಂದರೂ  ಬೇಗ ಎಚ್ಚರವಾಗುತ್ತದೆ. ನಾಳೆ ಆಫೀಸು ಇದೆ, ಬೆಳಗ್ಗೆ ಬೇಗ ಏಳಲೇ ಬೇಕು ಎಂದು ಮೊಬೈಲ್ ದೂರ ಇರಿಸಿ ಮಲಗಿಕೊಂಡು ಇನ್ನೇನು ನಿದ್ದೆ ಬಂತು ಅನ್ನುವಾಗ ಮೂಗಿಗೆ ಅಡರಿದ್ದು ಲ್ಯಾವೆಂಡರ್ ಘಮ. ನಿಶ್ಶಬ್ದವಾದ ರಾತ್ರಿಯಲ್ಲಿ ಮೆಲ್ಲನೆ ತಿರುಗುವ ಫ್ಯಾನ್. ಒಂದು ಕಣ್ಣು ಮಿಟುಕಿಸಿದಂತೆ ಉರಿಯುತ್ತಿರುವ ಗುಡ್ ನೈಟು ಅದರ ನಡುವೆ ಈ ಲ್ಯಾವೆಂಡರ್  ಸುವಾಸನೆ. ಇದೆಲ್ಲಿಂದ  ಘಂ ಅನ್ನಿಸಿತು ಎಂದು ನೋಡಿದಾಗ  ರೂಂ ಫ್ರೆಶ್ನರ್ ಪಾಕೆಟ್, ಬೆಡ್ ಪಕ್ಕ ಬಿದ್ದಿತ್ತು. ಅದೆನ್ನೆತ್ತಿ ಅದಿಡುವ ಸ್ಥಳದಲ್ಲಿ ನೇತು ಹಾಕಿ ಮತ್ತೆ ಮಲಗಲು ಪ್ರಯತ್ನಿಸಿದೆ. ಊಹೂಂ ಎಲ್ಲಿ ಬರುತ್ತೆ ನಿದ್ದೆ? ಅಂದ ಹಾಗೆ ಪರಿಮಳಕ್ಕೂ ನನಗೂ ಬಾರೀ ನಂಟು. ಪಿಜಿಯಲ್ಲಿದ್ದಾಗ ನಾಲ್ಕನೇ ಫ್ಲೋರಿನ ರೂಮಿನಿಂದಲೇ ಬೆಳಗ್ಗಿನ ತಿಂಡಿ ಏನು ಎಂಬುದನ್ನು ಅರಿಯುತ್ತಿದ್ದ ಚುರುಕು ಮೂಗು. ನಮ್ಮಮ್ಮನಿಗೂ ಹಾಗೆಯೇ ಮೂಗಿಗೆ ಸ್ಮೆಲ್ ಬಡಿಯುವುದು ಬಾರೀ ಬೇಗ. ಅಮ್ಮ ಸ್ಮೆಲ್ ನೋಡಿಯೇ ಅಡುಗೆ ಚೆನ್ನಾಗಿದೆಯೋ ಇಲ್ಲವೋ, ಯಾವ ಪದಾರ್ಥ  ಜಾಸ್ತಿ ಆಗಿದೆ ಎಂಬುದನ್ನು ಹೇಳಿ ಬಿಡುತ್ತಿದ್ದರು. ಅಡುಗೆಯಲ್ಲಿ ಏನು ಹೆಚ್ಚು ಕಮ್ಮಿ ಆಗಿದೆ ಎಂದು ರುಚಿ ನೋಡದೇ ಬರೀ ಸ್ಮೆಲ್ ನಿಂದಲೇ ಪತ್ತೆ ಹಚ್ಚುವಂಥಾ  ಸಾಮರ್ಥ್ಯ ನನ್ನ ಮೂಗಿಗೆ ಇಲ್ಲವಾದರೂ ಪರಿಮ...

ಮತ್ತೆ ಬ್ಲಾಗ್ ಬಾಗಿಲು ತೆರೆದಿದ್ದೇನೆ...

Image
ಬದುಕು ಆ ಕ್ಷಣಕ್ಕೆ ಖಾಲಿ ಖಾಲಿ ಅನಿಸಿಬಿಡುತ್ತದೆ.ಗುರುವೋ ಗುರಿಯೋ ಇಲ್ಲದಂತೆ ಕಾಣುತ್ತದೆ.ಮುಂದೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಎಲ್ಲಿಗೆ ಹೋಗಬೇಕು, ಎಲ್ಲಿ ನಿಲ್ಲಬೇಕು ಎಂಬ ಯಾವುದೇ ನಿರ್ಧಾರವಿಲ್ಲದೆ ಅದೊಂದು ಪಯಣ.ಕುಟುಂಬದಲ್ಲಿನ ಆಪ್ತರ ಅಗಲಿಕೆ ಬದುಕನ್ನು ನಲುಗಿಸಿ ಬಿಟ್ಟಿತ್ತು. ಒಂದಷ್ಟು ದಿನ ಅತ್ತು ಮತ್ತೆ ಕಣ್ಣೀರು ಒರೆಸಿ ನಿತ್ಯ ಕಾಯಕಕ್ಕೆ. ಎಲ್ಲ ನೋವುಗಳನ್ನು ನುಂಗಿ ನಗುವುದೆಷ್ಟ ಕಷ್ಚ. ಮನೆಯಲ್ಲಿ ಸೂತಕದ ಛಾಯೆ. ಎಲ್ಲರ ಮುಖದಲ್ಲೂ ದುಃಖ ,ಅವರಲ್ಲಿ ನನ್ನ ದುಃಖವನ್ನು ತೋಡಿಕೊಳ್ಳುವುದಾದರೂ ಹೇಗೆ? ಈ ಬದುಕು ನಶ್ವರ, ಹುಟ್ಟಿದವರು ಒಂದು ದಿನ ಸಾಯಲೇ ಬೇಕು ಎಂಬುದು ನಿತ್ಯ ಸತ್ಯ. ಆದರೆ ಸಾವು ಅದನ್ನು ಅರಗಿಸಿಕೊಳ್ಳುವುದು ಕಷ್ಟದ ವಿಷಯ. ಕೆಲಸದಲ್ಲಿ ತಲ್ಲೀನರಾಗಿದ್ದು ಬಿಟ್ಟರೆ ನೋವು ಗೊತ್ತಾಗುವುದಿಲ್ಲ. ಆದರೆ ಅದರ ನಡುವೆ ಸಿಕ್ಕ ಗ್ಯಾಪ್ ನಲ್ಲಿ ಆ ಸಾವು-ನೋವು ಚುಚ್ಚಿ ಬಿಡುತ್ತದೆ. ಇವತ್ತು ನಮ್ಮ ಜತೆ ಇದ್ದವರು ಮತ್ತೆ ಇಲ್ಲ, ಅವರು ತಿರುಗಿ ಬರುವುದೇ ಇಲ್ಲ ಎಂದು ಮನಸ್ಸಿಗೆ ಹೇಳುತ್ತಾ ಇದ್ದರೂ ಕಾಯುವಿಕೆ ಕಣ್ಣುಗಳಲ್ಲಿ ನೀರು ತುಂಬಿಸುತ್ತದೆ.   ಈ ಜಗತ್ತೇ ಬೇಡ ಎಂದು ಕಿರುಚಿ ಹೇಳುವುದೋ, ಈ ಬದುಕು ಸಾಕಾಗಿದೆ ಎಂದು ಬಿಕ್ಕಿ ಬಿಕ್ಕಿ ಅಳುವುದೋ...ಇದನ್ನು ಗೊಂದಲವೆನ್ನಲೋ ಮನಸ್ಸಿನ ನೋವು ಎನ್ನಲೋ. ಕತ್ತಲೆ ಕೋಣೆಯೊಂದರಲ್ಲಿ ನನ್ನನ್ನು ಬಂಧಿಸಿಟ್ಟ ಸ್ಥಿತಿ. ಕಿರುಚಿದ್ದು, ಅತ್ತಿದ್ದು ಕೂಗಿದ್ದು ಯಾರಿಗೂ ...

ನಾನೆಂಬ ಸ್ತ್ರೀ

Image
ನಾ ನೆಂಬ ಸ್ತ್ರೀ ನನ್ನೊಳಗಿನ ಅಗ್ನಿಕುಂಡದಲ್ಲುರಿದು ಆಹುತಿಯಾಗಲಾರೆ ಜ್ವಲಂತ ವಿಚಾರಗಳನ್ನೆಲ್ಲಾ ಶಿಥಿಲವಾದ ಹೆಣ್ಣಿನ ರೆಕ್ಕೆ ಸದ್ದುಗಳಲ್ಲೇ ಜೋಡಿಸಿಟ್ಟಿದ್ದೀನಿ ಬಿಕ್ಕಳಿಸುತ್ತಾ ವಿಕಸಿತವಾಗುವ ಮಣ್ಣಲ್ಲಿ ನಿದಿರೆಗೆ ಜಾರುವಾಗಲೂ ಬೆಳಕೆಂಬ ಅಮ್ಮ ನಂದಾದೀಪವಾಗಿ ಉರಿಯುತಿರಲು ಹುತ್ತರಿ ತೆನೆ ಗದ್ದೆಗಳ ಪುಣ್ಯ ಭೂಮಿಯಲಿ ಬೆಳೆಯುವ ಕ್ರಾಂತಿ ಬೀಜವನು ಅವಳು ಬಿತ್ತುತ್ತಿದ್ದಾಳೆ ನೀನಿನ್ನು ಮೈಕೊಡವಿ ಎದ್ದು ಬಾ ಅಂಧಕಾರದ ಆತ್ಮವೊಂದು ಕರೆಯುತ್ತಿದೆ ಬಂಧನದ ಸರಪಳಿ ನೋವಿನ ವೇಷಗಳನ್ನು ಕಿತ್ತೆಸೆದು ಅವಳು ಮುಗುಳ್ನಕ್ಕಳು ದೀರ್ಘ ಶಾಂತ ನಿಗೂಢ ಜೋಕಾಲಿಯಲಿ ನಿದ್ರಿಸಿದ್ದ ಬೆಳಗು ಕಿರಣಗಳು ಎಚ್ಚೆತ್ತು ಮೌನಿ ಮುಕ್ತಿ ಕುಟೀರದ ನೆತ್ತಿಯಲ್ಲುರಿದು ಕರಗಿ ಅಗ್ನಿ ಜ್ವಾಲೆಯಾಗಿ ಧಗಧಗಿಸಿದವು... (ಆದಿವಾಸಿ ಮಹಾಸಭಾ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಸಿ.ಕೆ ಜಾನು ಬರೆದ ಮಲಯಾಳಂ ಕವಿತೆಯ ಅನುವಾದ) (ಚಿತ್ರ ಕೃಪೆ: ಕೆಪಿಎನ್)

ಮರಳಲ್ಲಿ ಬರೆದ ಸಾಲುಗಳು

Image
ನೀ ನು ಅಂತರಾತ್ಮದ ಕರೆಗೆ ಓಗೊಟ್ಟು ಹೊರ ನಡೆದಾಗ ಕಡಲತಡಿಯಲ್ಲಿ ಏಕಾಂತದ ನಿಟ್ಟುಸಿರು ಪ್ರೀತಿಯ ಆಲಿಂಗನವ ಬಯಸಿದ ಎಳೆ ಮೈಗೆ ಉಪ್ಪು ನೀರಿನ ಸಿಂಚನ ತನ್ನೊಳಗಿರುವ ಚಿಪ್ಪಿನೆಡೆಯಲಿ ಅಡಗಿ ಕುಳಿತಿರುವ ಮುತ್ತು ಹೊರಬರಲು ಕಾಯುವ ವೇಳೆ ಏಕಾಂತದಲೊಂದು ಬಯಕೆ ನಿನ್ನೊಡಲಿಗೆ ಬರಲೆ? ಹೆಜ್ಜೆ ಮುಂದಿಟ್ಟು ತಿರುಗಿ ನೋಡಿದಾಗ ಒದ್ದೆ ಮರಳಲ್ಲಿ ಪುಟ್ಟ ಪಾದದ ಗುರುತು ಅಮ್ಮನಂತಿರುವ ಕಡಲು ಬೇಡವೆನ್ನುವುದಿಲ್ಲ ನನ್ನನ್ನೂ ಈ ಬಂಧನವ ಕಳಚಿ ಸಾಧಿಸುವುದೇನು ಬಂತು? ಒಂದೊಂದು ಹೆಜ್ಜೆಯಲೂ ಕಂಬನಿಯ ಕತೆಗಳ ಅಳಿದುಳಿದ ಸಾಲು ಹರಿದು ಹಾಕಿದ ಪುಟಗಳಲಿ ನೆನಪುಗಳ ಕುರುಹು ಕಲ್ಲು ಬಂಡೆಯನ್ನಪ್ಪಳಿಸಿದ ನೀರ ಹನಿಯೊಂದು ಪ್ರೀತಿಯನು ಚಿಮ್ಮಿಸಿ ಮುಳುಗಿ ಹೋಗುತಿದೆ ನೀರ ಗುಳ್ಳೆಗಳಲಿ ಬಣ್ಣ ಬಣ್ಣದ ಪ್ರತಿಬಿಂಬ ಅಲೆಗಳಲಿ ಒಂದಾಗುತ್ತಾ ಮಾಯವಾದಾಗ ಏಕಾಂತದ ಕೋಟೆಯಲಿ ನಾನು ಸ್ವತಂತ್ರಳಾಗುತ್ತಿದ್ದೆ

ಹಸಿವು

Image
ಹಸಿವಿನ ಸುಖ, ಪ್ರಣಯದ ನೋವು ಅಸ್ತಮಿಸಿದ ಹೊತ್ತು ಕತ್ತಲೆಯಲಿ ಎಲ್ಲವನು ನುಂಗಿ ಬದುಕಿದ ನಾನು ವಿಷಯ ದಾರಿದ್ರ್ಯದ ಮೂಟೆಯನ್ನು ಹೊತ್ತು ಭಿಕ್ಷಾಟನೆಗೆ ಹೊರಟು ನಿಂತಿದ್ದೇನೆ ನನಗೇನೂ ಕೊಡಲು ಬಯಸದವರು ನನ್ನಿಂದ ಪಡೆಯಲಿಚ್ಛಿಸದವರು ಬರೆದಿಟ್ಟ ಲೆಕ್ಕ ಪುಸ್ತಕದಲ್ಲಿ ನನ್ನ ಹಸಿವಿನ ಲೆಕ್ಕ ಸೊನ್ನೆಯಾಗಿಯೇ ಉಳಿದಿತ್ತು ಎಲ್ಲವನ್ನೂ ಕೂಡಿಸಿ, ಕಳೆದು ಗುಣಿಸಿ, ಭಾಗಿಸಿದ ದೇಹಗಳು ನನ್ನ ಹಾದು ಹೋದವು ರಕ್ತವೇ ಇಲ್ಲದ ಮೂಳೆ ಮಾಂಸಗಳ ತಡಿಕೆ ನೋಡಿ ನನಗೆ ಅಚ್ಚರಿ! ಅವರ ಹೆಜ್ಜೆ ಬೆನ್ನತ್ತಿ ಮುಂದೆ ನಡೆದೆ ನನಗೆ ಗೊತ್ತಿಲ್ಲದ, ನನ್ನನ್ನು ಅರಿಯದ ದಾರಿಯಲ್ಲಿ ಅಪರಿಚಿತ ಮುಖಗಳೆಡೆ ನಾನು ಒಬ್ಬಂಟಿ ನಾನಾರೆಂದು ಕೇಳಲು ಯಾರೂ ಇಲ್ಲದ ಬೀದಿಯಲಿ ಎಲ್ಲರೂ ನಾನಾರೆಂದು ಪಿಸುಗುಡುವ ಸದ್ದು ಗಹಗಹಿಸಿ ನಕ್ಕು ನನ್ನ ಸೋಕಿದ ಬರಡು ಭೂಮಿಯ ಉಷ್ಣ ಗಾಳಿ ದೇಹವನು ಗೀರಿ ರಕ್ತ ಹರಿಸಿದಾಗ ಆ ರಕ್ತಕ್ಕೆ ಗಂಧವಿರಲಿಲ್ಲ.. ಹೀಗೂ ಇರಬಹುದೆ? ದೇಹ ದಣಿದಿತ್ತು, ನಿದ್ರಿಸಲು ರಾತ್ರಿಯನ್ನರಸಿದೆ ಬೆಳಕಿನ ಕಿರಣಗಳು ವಕ್ರೀಭವನಗೊಂಡ ದಾರಿಗಳಲ್ಲಿ ಕಪ್ಪು ಬೆಳಕಿಗೆ ಜಾಗವಿರಲಿಲ್ಲ ನೆರಳು ಬಯಸಿ, ಓಡುವ ಮರಗಳ ಹಿಂದೆ ಓಡಿ ಹೋಗುತ್ತಿರುವ ನೆರಳುಗಳ ಹಿಂದೆ ಓಡುತ್ತಾ, ಓಡಲಾರದೆ ಬಿದ್ದು ಬಿಟ್ಟೆ! ಕುಸಿದು ಬಿದ್ದ ನನ್ನ ದೇಹ ಆ ಭೂಮಿಗೂ ಬೇಡವಾಗಿತ್ತು ಅಸ್ತಿತ್ವವಿಲ್ಲದ ನಾನು ಭಾರವಾದ ದೇಹ ಹೊತ್ತು ಮತ್ತೆ ಹೊರಟು ನಿಂತಿದ...

ಸ್ಟೇಟಸ್ ? 35 ಸಿಂಗಲ್

Image
ಹಲೋ ..ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಲಾ? ಹೇಳಿ... ನಿಮಗೆ ಬಾಯ್ ಫ್ರೆಂಡ್ ಇಲ್ವಾ? ಯಾಕೆ? ಸುಮ್ನೆ...ಕೇಳಿದ್ದು ಅಷ್ಚೇ... ಹ್ಮ್... ನಿಮ್ದು ಲವ್ ಫೈಲ್ಯೂರಾ? ಯಾಕೆ? ನಿಮ್ಮ ಕವನದಲ್ಲಿ ವಿಷಾದ ಇಣುಕುತ್ತೆ.. ಕೈ ಕೊಟ್ಟು ಹೋದ ಹುಡ್ಗನ ಬಗ್ಗೆ ಬರೆದಂತಿದೆ.. ಹಾಗೇನಿಲ್ಲ... ಓಕೆ ಇಂಥಾ ಪ್ರಶ್ನೆಗಳು ಆಗೊಮ್ಮೆ ಈಗೊಮ್ಮೆ ಫೇಸ್ಬುಕ್ ಇನ್ ಬಾಕ್ಸಲ್ಲಿ ಒಕ್ಕರಿಸಿ ಬಿಡುತ್ತವೆ. ಫೇಸ್ ಬುಕ್ ನಲ್ಲಿರೋ ಕೆಲವರಿಗೆ ರಿಲೇಷನ್ ಶಿಪ್ ಸ್ಟೇಟಸ್ ನಲ್ಲಿ ಸಿಂಗಲ್ ಅನ್ನೋ ಪದದ ಮೇಲೆಯೇ ಕಣ್ಣು. ಕೆಲವರಂತೂ ನಿಮಗೆ ಅಫೇರ್ ಏನೂ ಇಲ್ವಾ? ಮದ್ವೆ ಯಾವಾಗ? ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಏನೆಂದು ಉತ್ತರಿಸಲಿ? ಬರೀ ಫೇಸ್ ಬುಕ್ನಲ್ಲಷ್ಟೇ ಪರಿಚಯವಿರುವ ವ್ಯಕ್ತಿ ನಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ಕಿರಿ ಕಿರಿ ಅನಿಸಿದರೆ ಏನು ಮಾಡುವುದು? ಉತ್ತರ ಸಿಂಪಲ್ ..ಬ್ಲಾಕ್! ಅಂದ ಹಾಗೆ ಹುಡುಗಿಯರ ರಿಲೇಷನ್ ಶಿಪ್ ಸ್ಟೇಟಸ್ ಗಳಲ್ಲಿ ಈ ಸಿಂಗಲ್' ಅನ್ನೋದು ಕುತೂಹಲದ ಮೂಟೆ. ಮದ್ವೆ ಆಗದೇ ಸಿಂಗಲ್ ಆಗಿರೋ ಹುಡುಗಿ ಒಂದೆಡೆಯಾದರೆ, ಸಂಬಂಧದಿಂದ ಹೊರ ಬಂದವಳು ಇನ್ನೊಂದೆಡೆ. ಇಲ್ಲಿ ಇಬ್ಬರೂ ಸಿಂಗಲ್ ಹುಡ್ಗೀರೇ. ಇಬ್ಬರ ಜೀವನಾನುಭವಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ.ಆದಾಗ್ಯೂ, ಒಬ್ಬ ಹುಡುಗನನ್ನು ನೋಡಿದಾಗ ಇವರಿಬ್ಬರ ಮನಸ್ಸಿನಲ್ಲಿ ಮೂಡುವ ಪ್ರೇಮದ ಭಾವನೆಗಳು ಒಂದೇ ರೀತಿಯದ್ದಾಗಿದ್ದರೂ, ಅದನ್ನು ಸ್...

ಬಸ್ ಪಯಣದ ಸುಖ

Image
ಮೊನ್ನೆ ಶಿವಾಜಿನಗರಕ್ಕೆ ಹೋಗುತ್ತಿದ್ದಾಗ ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ಫೋನಲ್ಲಿ ಮಾತನಾಡುತ್ತಿರುವುದು ಬೇಡ ಬೇಡವೆಂದರೂ ನನ್ನ ಕಿವಿಗೆ ಬೀಳುತ್ತಿತ್ತು. ಸಾಮಾನ್ಯವಾಗಿ ಬಸ್‌ನಲ್ಲಿ ಪ್ರಯಾಣಿಸುವಾಗ ಕುಳಿತುಕೊಳ್ಳಲು ಸೀಟು ಸಿಕ್ಕರೆ ಪುಸ್ತಕ ಓದುವುದು ಅಭ್ಯಾಸ. ಅಂದು ಬಸ್ಸಿನಲ್ಲಿ ಜನ ತುಂಬಾ ಇದ್ದರೂ ಪುಣ್ಯಕ್ಕೆ ನನಗೆ ಸೀಟು ಸಿಕ್ಕಿತ್ತು. ಹಿಂದಿನ ಸೀಟಲ್ಲಿ ಕುಳಿತ ನನ್ನಷ್ಟೇ ವಯಸ್ಸಿನ ಹುಡುಗಿಯೊಬ್ಬಳು ವಟ ವಟ ಎಂದು ಫೋನಲ್ಲಿ ಮಾತು ಶುರು ಹಚ್ಚಿಕೊಂಡಿದ್ದಳು. ಇಂಗ್ಲೀಷ್‌ನಲ್ಲಿ ಆಕೆ ಜೋರಾಗಿ ಮಾತನಾಡುತ್ತಿದ್ದುದರಿಂದಲೇ ನನ್ನ ಕಿವಿ ನೆಟ್ಟಗಾಯಿತು. ವೈ ಯು ಇನ್‌ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್‌ವೀನ್. ಐ ಯೆಸ್ಟರ್‌ಡೇ ಟೋಲ್ಡ್ ನಾ..ಅಂಡರ್‌ಸ್ಟಾಂಡ್ ಪಾ..ಹೀಗೇ ಆಕೆಯ ಇಂಗ್ಲಿಷ್ ಸಂಭಾಷಣೆ ಮುಂದುವರಿಯಿತು. ಮಾತು ಮಾತುಗಳೆಡೆಯಲ್ಲಿ ಆಕೆ ನೋಪಾ, ಯೆಸ್ ಪಾ ಅಂತ ಹೇಳುತ್ತಾ ತನ್ನ ಏರುದನಿಯನ್ನು ಸ್ವಲ್ಪ ಸ್ವಲ್ಪವೇ ತಗ್ಗಿಸುತ್ತಿದ್ದಳು. ಒಮ್ಮೆ ಹಿಂತಿರುಗಿ ನೋಡಿದೆ, ಆಕೆ ಫೋನ್ ಸಂಭಾಷಣೆಯಲ್ಲಿ ಮಗ್ನಳಾಗಿದ್ದಾಳೆ. ಪುಸ್ತಕ ಹಿಡಿದುಕೊಂಡು ಕೂತಿದ್ದೆನಾದರೂ ವೈ ಯು ಇನ್‌ಸರ್ಟಿಂಗ್ ಯುವರ್ ನೋಸ್ ಇನ್ ಬಿಟ್‌ವೀನ್ ಎಂಬ ವಾಕ್ಯ ನನ್ನ ಕಿವಿಗೆ ಬೇಡ ಬೇಡವೆಂದರೂ ಅಪ್ಪಳಿಸುತ್ತಿತ್ತು. ಆಕೆ ಹೇಳಿದ್ದು, ನೀನ್ಯಾಕೆ ಮಧ್ಯೆ ಮೂಗು ತೂರಿಸುತ್ತೀಯಾ ಎಂಬುದನ್ನೇ ಅಲ್ಲವೇ? ಕನ್ನಡ ಪ್ರತಿಪದವನ್ನೂ ಹಾಗೆಯೇ ಇಂಗ್ಲಿಷ್‌ಗೆ ಅನುವಾದ...

ಮಹಾಬಲಿಗೊಂದು ಪತ್ರ

Image
ಪ್ರೀತಿಯ ಮಾವೇಲಿ ಅಲಿಯಾಸ್ ಮಹಾಬಲಿ, ಓಣಂ ಹಬ್ಬದ ಪ್ರಯುಕ್ತ ದೇವರ ಸ್ವಂತ ಊರಿಗೆ ಭೇಟಿ ನೀಡುವ ನಿನಗೆ ಸ್ವಾಗತ. ನಮ್ಮೂರಿಗೆ ಭೇಟಿ ನೀಡುವ ಮುನ್ನ ನಿನಗೆ ಹಲವಾರು ವಿಷಯಗಳ ಬಗ್ಗೆ ಹೇಳಬೇಕಾಗಿದೆ. ಅದಕ್ಕೆ ಈ ಪತ್ರ. ಕಾಸರಗೋಡಿಗೆ ದೀಪಾವಳಿ ಹಬ್ಬದ ವೇಳೆ ಬಲೀಂದ್ರನಾಗಿಯೂ, ಓಣಂ ಹಬ್ಬದಂದು ಮಹಾಬಲಿಯಾಗಿ ಬರುವ ನಿನಗೆ ಗಡಿನಾಡ ಕನ್ನಡಿಗರಂತೆ ಮಲಯಾಳಂ, ಕನ್ನಡ, ತುಳು ಹೀಗೆ ಐದಾರು ಭಾಷೆ ಗೊತ್ತಿರುತ್ತದೆ ಅಲ್ವಾ. ಆದ್ದರಿಂದ ಕನ್ನಡದಲ್ಲಿ ಬರೆದ ಈ ಪತ್ರ ಓದಲು ನಿನಗೆ ಸಮಸ್ಯೆ ಆಗಲ್ಲ ಅಂದುಕೊಂಡಿದ್ದೀನಿ. ಊರಲ್ಲಿ ಸಿಕ್ಕಾಪಟ್ಟೆ ಮಳೆ ಬೇರೆ. ಮಳೆಯೊಂದಿಗೆ ರಸ್ತೆಯ ಡಾಂಬರು ಕಿತ್ತುಹೋಗಿದ್ದು, ರಸ್ತೆಯಲ್ಲಿರುವ ಗುಂಡಿಯಲ್ಲೆಲ್ಲಾ ನೀರು ತುಂಬಿ ಪುಟ್ಟ ಕೊಳದಂತಾಗಿದೆ. ಅಲ್ಲೇ ಬೇಕಾದರೆ ಮೀನು ಕೖಷಿ ಕೂಡಾ ಮಾಡಬಹುದು. ಬಸ್ಸಲ್ಲಿ ಪ್ರಯಾಣ ಮಾಡುವಾಗ ಒಂಟೆ ಸವಾರಿ ಅನುಭವ ನಿನಗಾಗಬಹುದು. ಒಂದಷ್ಟು ದಿನ ನೀನು ನಮ್ಮೂರಲ್ಲಿ ಓಡಾಡಿದರೆ ಸಾಕು, ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಕ್ಕಿ, ನಿನ್ನ ಡೊಳ್ಳು ಹೊಟ್ಟೆ ಕರಗಬಹುದು. ಬರುವ ಮುನ್ನ ಯಾವ ಜಿಲ್ಲೆಯಲ್ಲೂ ಬಂದ್ ಆಚರಣೆ ಮಾಡುತ್ತಿಲ್ಲ ಎಂಬುದನ್ನು ಖಾತರಿ ಪಡಿಸಿಕೋ. ಕೋಮುಗಲಭೆ, ರಾಜಕೀಯ ಕೊಲೆಗಳು ಇಲ್ಲಿ ಮಾಮೂಲಿ ಆಗಿ ಬಿಟ್ಟಿವೆ. ಕೆಂಪು, ಹಸಿರು, ಕೇಸರಿ ಧ್ವಜಗಳ ಕೆಳಗೆ ಯಾರ್ಯಾರದೋ ನೆತ್ತರು ಹರಿಯುತ್ತಿದೆ. ಜನರು ರಕ್ತದಾಹಿಗಳಂತೆ ಹೊಡೆದಾಡುತ್ತಿದ್ದಾರೆ. ಯಾವ ಮೂಲೆಯಿಂದ ಗುಂಡು ಹಾರುತ್ತದೋ, ಬ...

ಅಳಿದುಳಿದ ಕನವರಿಕೆ

Image
ಲೇಖನಿಯ ತುದಿಯ ಜ್ವಾಲೆ ನಂದಿ ಹೋದ ಮೇಲೆ ಮನಸ್ಸಿನ ಭಾವನೆಗಳು ಪದಗಳಿಗೆ ನಿಲುಕುವುದಿಲ್ಲ ಮೌನಿ ನಾನು- ನೀನೂ ಈ ಬಿಗು ಮೌನದಲ್ಲಿ ಸಿಕ್ಕಿ ನಿಟ್ಟುಸಿರು ಬಿಟ್ಟಾಗ ದಕ್ಕಿದ್ದು ನಿನ್ನದಲ್ಲವೆಂಬ ಅವ್ಯಕ್ತಭಾವ ಓ ಮೌನವೇ...ಮಾತಾಗಬೇಡ ಕ್ಷಣ ಮಾತ್ರಕ್ಕಾದರೂ ಇನಿಯನಾಗಿಬಿಡು ರಕುತದ ಕಲೆಯಲ್ಲಿ ಚಿತ್ತಾರ ಬಿಡಿಸಿ ಸುಮ್ಮನಾದಾಗ ದೂರ ದಿಗಂತದಲ್ಲಿನ ಚುಕ್ಕಿ ಕಣ್ಣು ಮಿಟುಕಿಸಿ ಹೋದಂತೆ ಹೇಳದೇ ಹೋದ ಮಾತುಗಳನು ಅಪ್ಪಿ ಮುದ್ದಾಡಿ ಚುಂಬಿಸುವಾಗ ನಾನು ನಿನ್ನವಳಾಗಿ ಬಿಡಬೇಕು ಕಣ್ಣೀರು ಮೂಡಿಸಿದ ಕಾಮನಬಿಲ್ಲಿನಲಿ ಬಣ್ಣಗಳ ಎಣಿಸುವಾಗ ನೀನು ಮಾತಾಗಬೇಕು ನಿನ್ನ ಮಾತಿನಲ್ಲಡಗಿದ ಮೌನ ನಾನಾಗಬೇಕು

ಅಪ್ಪನ ಡೈರಿಯಿಂದ ಕದ್ದ ಪುಟ...

Image
ಈವಾಗ ಹೇಗೆ ಸಮಯ ಕಳೆಯುತ್ತಿದ್ದೀರಿ? ಕೆಲಸದಿಂದ ನಿವೃತ್ತಿ ಹೊಂದಿದ ನಂತರ ಎಷ್ಟೋ ಜನ ಇದೇ ಪ್ರಶ್ನೆಯನ್ನು ಅದೆಷ್ಟು ಬಾರಿ ಕೇಳಿದ್ದಾರೇನೋ ಗೊತ್ತಿಲ್ಲ. ಹಳ್ಳಿಯಲ್ಲಿರುವ ಕಾರಣ ಹಿತ್ತಿಲಲ್ಲಿ ಒಮ್ಮೆ ಸುತ್ತಾಡಿ, ದನ ಕರು, ಗಿಡ, ಮರ ಎಲ್ಲವನ್ನೂ ನೋಡ್ಕೋಳೋದು, ಇನ್ನೇನೋ ವಸ್ತು ತರೋಕೆ ಅಂತಾ ಅಂಗಡಿಗೆ ಹೋಗಿ ಬರೋದು, ಎರಡ್ಮೂರು ದಿನಪತ್ರಿಕೆ ಓದೋದು, ಆಮೇಲೆ ಟೀವಿ ನೋಡ್ತಾ ಕುಳಿತರೆ ದಿನ ಕಳೆದು ಹೋಗುವುದೇ ಗೊತ್ತಾಗಲ್ಲ. ಈವಾಗಂತೂ ವಿಶ್ವಕಪ್ ಫುಟ್ಬಾಲ್ ಇದೆ ಅಲ್ವಾ? ನಿದ್ದೆ ಬರುವಷ್ಟು ಹೊತ್ತು ಟೀವಿ ನೋಡ್ಬಹುದು. ಇಷ್ಟೊಂದು ವರ್ಷ ಸ್ವಂತ ಕೆಲಸದಲ್ಲಿ ಬ್ಯುಸಿಯಾಗಿದ್ದ ನನಗೆ ನಿವೃತ್ತಿ ನಂತರ ಮನೆಯಲ್ಲಿ ಸುಮ್ಮನೆ ಕೂರೋದು ಅಂದ್ರೆ ಕಿರಿಕಿರಿ. ಅದಕ್ಕೆ ಮನೆಯ ಹೊರಗೆ ಸುತ್ತಾಡ್ತಾ ಇರ್ತೀನಿ. ಅಪ್ಪಾ ಟೈಮ್ ಸಿಕ್ಕಾಗಲೆಲ್ಲಾ ಏನಾದ್ರೂ ಬರೀರಿ ಅಂತಾ ಮಗಳು ಹೇಳ್ತಾನೇ ಇರ್ತಾಳೆ. ನಾನು ನಕ್ಕು ಸುಮ್ಮನಾಗ್ತೀನಿ .ನಿಜವಾಗ್ಲೂ, ನನಗೆ ಬರೆಯೋಕೆ ಬರಲ್ಲ. ಬರೆದದ್ದನ್ನು ಓದೋದು ಇಷ್ಟ. ಹೂಂ..ಇವತ್ತು ಏನಾದ್ರೂ ಬರೆಯೋಣ ಅಂತಾ ಪ್ರಯತ್ನ ಮಾಡಿದೆ. ಏನು ಬರೆಯಲಿ? ಅಂತಾ ಯೋಚಿಸ್ತಾ ಕುಳಿತುಕೊಂಡು ಒಂದು ಗಂಟೆ ಹಾಳು ಮಾಡಿಬಿಟ್ಟೆ! ಮನಸ್ಸಲ್ಲಿರೋದನ್ನೇಲ್ಲಾ ಖಾಲಿ ಹಾಳೆಯಲ್ಲಿ ಗೀಚಿದರೆ ಮನಸ್ಸು ನಿರಾಳವಾಗುತ್ತೆ ಅಂತಾ ನನ್ನವಳು ಆಗಾಗ್ಗೆ ಹೇಳ್ತಾನೇ ಇರ್ತಾಳೆ. ಅವಳ ಮನಸ್ಸನ್ನು ಕಾಡುವ ಯಾವುದೇ ವಿಷಯ ಇರಲಿ ಅದನ್ನು ಹಾಳೆಯಲ್ಲಿ ಗೀಚಿದರೆ ಮಾತ್ರ ಆಕೆ...

ಈ ಕ್ಷಣದ ಮೌನ

Image
ನೀ ನನ್ನೊಂದಿಗೆ ಮಾತು ಬಿಟ್ಟ ಕ್ಷಣ ಮೌನದಲಿ ಮಾತು ಮೊಳಕೆಯೊಡೆದಿತ್ತು ನಾವಿಬ್ಬರೂ ಹೆಚ್ಚು ಮಾತನಾಡಿದ್ದೂ ಈ ಮೌನದಲ್ಲೇ... ಆರೋಹಣ ಅವರೋಹಣದ ನಿಟ್ಟುಸಿರ ಸಂಜೆಗಳಲಿ ಬಯ್ಯ ಮಲ್ಲಿಗೆ ಬಿರಿಯುವಾಗ ನೀನದನ್ನು ವಸಂತವೆಂದು ಕರೆದೆ ನನ್ನ ಪ್ರೀತಿಯ ಸೆಳೆತವನ್ನು ನದಿಗೆ ಹೋಲಿಸುವಾಗ ನೀನು ಪ್ರಶಾಂತ ಸಾಗರವಾಗಿದ್ದೆ... ದಿಗಂತದಲಿ ಹಾರಾಡುವ ಹಕ್ಕಿಗೂ ನೀರಲ್ಲಿ ತೇಲುವ ಮೀನಿಗೂ ಇದೆ ಬಂಧನದ ಭಯ! ಪ್ರೀತಿಯ ಬಾಹುಗಳಲ್ಲಿ ಕಣ್ಮುಚ್ಚಿ ಬಂಧಿಯಾಗುವ ಹೊತ್ತು ಸೇರಿಕೊಳ್ಳುವ ತವಕದ ಹಿಂದೆ ಕಳೆದುಕೊಳ್ಳುವ ಭೀತಿ ಮುಖವಾಡ ಧರಿಸಿ ನಕ್ಕಾಗ ಮಾತು-ಮೌನದ ನಡುವೆ ಪ್ರೀತಿ ಬಿಕ್ಕಳಿಸಿದ್ದು ಕೊನೆಗೂ ಕೇಳಲೇ ಇಲ್ಲ

ಪ್ರೀತಿ ಎಂದರೆ? ಆಫ್ಟರ್ ಶೇವ್ ಲೋಷನ್ನಂತೆ

Image
ಪ್ರೀತಿ ಎಂದರೆ? After shave lotionನಂತೆ ಎಂದು ಹೇಳಿ ಅವನು ಪಕಪಕ ನಗುತ್ತಿದ್ದ. ಅವನನ್ನೇ ದುರುಗುಟ್ಟಿ ನೋಡಿದೆ. ಕ್ಲೀನ್ ಶೇವ್ ಮಾಡಿದ್ದ ಅವನ ನುಣುಪಾದ ಕೆನ್ನೆಯಲ್ಲಿ ಹಸಿರು ಚುಕ್ಕಿಯಂತಿರುವ ಚಿಗುರು ಗಡ್ಡ ಇನ್ನೂ ಮುದ್ದಾಗಿ ಕಾಣುತ್ತಿತ್ತು. ನಾನು ಸೀರಿಯಸ್ಸಾಗಿ ಕೇಳಿದ್ದು ... ನಾನು ಸೀರಿಯಸ್ಸಾಗಿಯೇ ಹೇಳಿದ್ದು... ನಿನ್ನ ಜತೆ ವಾದ ಮಾಡಲ್ಲ ಪೆದ್ದಿ ನೀನು... ಹೌದು... ನಾನು ಪೆದ್ದಿ...ನನಗೇನೂ ಗೊತ್ತಿಲ್ಲ...ನಾನೀವಾಗ ಮಾಡುತ್ತಿರುವುದು ಸರಿಯೋ ತಪ್ಪೋ ಯಾವುದೂ ಗೊತ್ತಿಲ್ಲ ಫೇಸ್ಬುಕ್ನಲ್ಲಿ Feeling Confused ಅನ್ನೋ ಸ್ಟೇಟಸ್ ಹಾಕಿ ಬಿಡಲಾ? ಛೇ...ಬೇಡ... ಅವನ ಜತೆ ಮಾತನಾಡಿದಾಗ ನನಗ್ಯಾಕೆ ಅಷ್ಟು ಸಮಾಧಾನವಾಗುತ್ತದೆ? ಅವನ ಸೆನ್ಸ್ ಆಫ್ ಹ್ಯೂಮರ್, ಸಿಂಪ್ಲಿಸಿಟಿಗೆ ನಾನು ಫಿದಾ ಆಗಿಬಿಟ್ಟಿದ್ದೇನೆ. ಅವನ ಮಾತು, ಮೌನ, ನಗು ಎಲ್ಲವೂ ಇಷ್ಟವಾಗತೊಡಗಿದೆ. ನನ್ನಂತೆಯೇ ಅದೆಷ್ಟು ಹುಡ್ಗೀರು ಅವನ ಬಗ್ಗೆ ಕನಸು ಕಾಣುತ್ತಿದ್ದಾರೋ ಏನೋ. ಹುಡ್ಗೀರನ್ನೇ ಮೋಡಿ ಮಾಡೋಕೆ ಹುಟ್ಟಿದ್ದಾನೆ ಅನ್ನೋ ಹಾಗಿದೆ ಅವನ ಪರ್ಸನಾಲಿಟಿ... ರಾತ್ರಿ 11.30ರ ನಂತರ ಹಾಸ್ಟೆಲ್ ರೂಂನಲ್ಲಿ ಕುಳಿತು ರೂಂಮೇಟ್ಸ್ ಜತೆ ಪಟ್ಟಾಂಗ ಹೊಡೆಯುವಾಗ ಅವನ ಬಗ್ಗೆ ಹೇಳಿದ್ದೆ. ನನ್ನ ಮನಸ್ಸಲ್ಲಿ ಏನೆಲ್ಲಾ ಇತ್ತೋ ಎಲ್ಲವನ್ನೂ ನಾನ್ಸ್ಟಾಪ್ ಆಗಿ ಹೇಳಿದ ನಂತರ ತಿಳೀತು ಇಷ್ಟೆಲ್ಲಾ ಹೇಳಬಾರದಿತ್ತು ಅಂತ... ಯೇ ತೋ ಪಾಗಲ್ ಹೋಗಯಿ! ನನ್ನ ಮಾತ...

ದೇವರಿದ್ದಾನೆ!

Image
ಅಮ್ಮಾ ಈ ಎಳನೀರಲ್ಲಿ ನೀರು ಹೇಗೆ ಬಂತು ಎಂದು ಕೇಳುವ ಕೂಸು ಅಗರಬತ್ತಿಯ ಪರಿಮಳದಲ್ಲಿ ಉತ್ತರ ಕಂಡು ಕೊಂಡಿತ್ತು... ದೇವರಿದ್ದಾನೆ! ನೀ ನೋಡಿದ್ದೀಯಾ? ಕೇಳಿದ್ದಳು ಗೆಳತಿ.. ಹೂಂ ನೋಡಿದ್ದೇನೆ ಕಣೇ.. ಖಾಲಿ ಹೊಟ್ಟೆಯಲ್ಲಿ ಮಲಗಿರುವಾಗ ಸಿಕ್ಕ ಬ್ರೆಡ್ಡು ತುಂಡುಗಳಲ್ಲಿ ಜೇಬು ಖಾಲಿಯಾಗಿರುವಾಗ ಪ್ರತಿಫಲ ಬಯಸದೆ ಯಾರೋ ಕೊಟ್ಟ ದುಡ್ಡಲ್ಲಿ ನಾನವನ ಕಂಡಿದ್ದೆ ಮೊನ್ನೆ ಮತ್ತೆ ಸಿಕ್ಕಿದ ಕಣೇ ಕಣ್ಣೀರು ಸುರಿಸಿ ನಡೆಯುವಾಗ ನೋಡಿ ನಕ್ಕಿದ್ದ ದುರುಗುಟ್ಟಿ ನೋಡಿದೆ ನಾನಿದ್ದೀನಿ ಎಂದು ಹೇಳಿದ ಎಲ್ಲಿ ಎಂದು ಕೇಳಿಯೇ ಬಿಟ್ಟೆ ನಿನ್ನಲ್ಲಿ ಎಂದು ಬಿಡುವುದೆ?

ಗಾಂಧಿ ಬಾ...

Image
ಮೂರು ದಾರಿ ಸೇರುವ ಜಂಕ್ಷನ್ನಲ್ಲಿ ಕಲ್ಲಿನಲಿ ಕೆತ್ತಿದ ಪ್ರತಿಮೆಯಾಗಿ ಪ್ರತಿಭಟನೆಗೂ, ಸತ್ಯಾಗ್ರಹಕ್ಕೂ ಮೌನ ಸಾಕ್ಷಿಯಾಗಿ ನಿಂತಿರುವ ಭೈರಾಗಿ ಸರ್ಕಾರಿ ಕಚೇರಿಗಳ ಗೋಡೆಗೆ ತೂಗು ಹಾಕಿದ ಫೋಟೋಗಳಲಿ ಭ್ರಷ್ಟಾಚಾರಿಗಳ ನೋಡಿ ಮರುಗುತ್ತಾ ಲಂಚದ ನೋಟಿನ ಕಂತೆಗಳಲಿ ನಗುತಿಹನು ಗಾಂಧಿ ನೀ ಮಹಾತ್ಮ...ಅಹುದಹುದು ರಾಷ್ಟ್ರಪಿತ ಎಂದು ಕರೆದಿದ್ದರೂ ಸಂವಿಧಾನದ 18 (1) ಪರಿಚ್ಛೇದ ಪ್ರಕಾರ ಇದು ಅಸಂವಿಧಾನಿಕವಂತೆ! ನಿನ್ನ ಆತ್ಮಕತೆಯನ್ನೋದಿ ಮನದಲ್ಲೇ ಧ್ಯಾನಿಸಿದೆ ಗಾಂಧಿ ಸಿನಿಮಾದಲ್ಲಿನ ಪಾತ್ರಧಾರಿಯೇ ಕಣ್ಮುಂದೆ ಬಂದಾಗ ಕಣ್ಣು ತೆರೆದೆ... ನೀನು ಕಣ್ಮುಚ್ಚಿ ನಕ್ಕಿರಬಹುದೆ? ನಿನ್ನ ಮೇಲೆ ಆರೋಪಗಳನ್ನು ಹೊರಿಸಿ ಪತ್ರಿಕೆ, ಫೇಸುಬುಕ್, ಟ್ವೀಟರ್ ಗಳಲ್ಲಿ ಗಾಂಧಿ ಹೀಗಿದ್ದರು ಎಂದು ಜರೆಯುವಾಗ ಮನದಲ್ಲಿ ಕಸಿವಿಸಿ ನೀನದಕೆ ಉತ್ತರ ನೀಡುವಂತಿದ್ದರೆ... ಅಹಿಂಸೆಯೇ ಧರ್ಮ ಸತ್ಯವೇ ಬಲವೆಂದು ಬಾಳಿ ಬದುಕಿದ ನೀನು ಸ್ವಾತಂತ್ರ್ಯ ಸಿಕ್ಕಿದಾಗಲೂ ದೇಶ ವಿಭಜನೆಯ ನೋವಲ್ಲಿ ಸ್ವಾತಂತ್ರ್ಯದ ಸವಿಯುಣ್ಣಲಿಲ್ಲ ಕೊನೆಗೆ ಗೋಡ್ಸೆಯ ಗುಂಡೊಂದು ನಿನ್ನೆದೆಯ ಸೀಳಿದಾಗ ಹೇ ರಾಮ್ ಎಂಬ ಕೊನೆಯ ಮಾತಲ್ಲಿ ಎಲ್ಲವೂ ಹೇಳಿಬಿಟ್ಟೆ! ಹೇ...ಸಬರ್ಮತಿಯ ಸಂತ ಮತ್ತೊಮ್ಮೆ ಹುಟ್ಟಿ ಬರುವಿಯಾದರೆ ಬೇಗ ಬಾ... ಆದರೆ ಒಂದು ಕಂಡೀಷನ್ ಈ ನೆಲದಲ್ಲಿ ಕಾಲಿಡದೆ ಮನದಲ್ಲಿ ಸ್ಫೂರ್ತಿ ಸೆಲೆಯಾಗಿ ಬಾ...

ಜಾಹೀರಾತು

Image
ಸುಗಂಧ ಭರಿತ ಸೋಪುಗಳನ್ನು ಮೆಲ್ಲ ಮೆಲ್ಲನೆ ಮೈ ಮೇಲೆ ಜಾರಿಸಿ ನೊರೆಗಳನ್ನೊಮ್ಮೆ ಊದಿ ಗುಳ್ಳೆಗಳನ್ನು ಕಂಡು ನಕ್ಕು... ಅರ್ಧ ದೇಹವನ್ನು ತುಂಡು ಬಟ್ಟೆಯಲ್ಲಡಗಿಸಿ ತನಗಾಗಿ ಕಾದು ನಿಂತ ಪ್ರಿಯಕರನ ತೆಕ್ಕೆಗೆ ಬಿದ್ದು ಅವನು ಅವಳ ದೇಹ ಗಂಧದಲ್ಲಿ ತಲ್ಲೀನವಾಗುವ 2 ನಿಮಿಷದ ಜಾಹೀರಾತು ಹಸಿದ ಹೊಟ್ಟೆಯಲ್ಲಿ ನಗುವುದನ್ನೂ ಸೌಂದರ್ಯವೆಂದರೆ ದೇಹ ಮಾತ್ರವಲ್ಲ ಎಂಬುದನ್ನು ಬದುಕು ಆಕೆಗೆ ಕಲಿಸಿದಾಗ ಅವಳು ಕ್ಯಾಮೆರಾ ಮುಂದೆ ಮೀಯಲಿಲ್ಲ... ಅವಳ ದೇಹಗಂಧವನ್ನರಸಿ ಯಾರೂ ಬರಲಿಲ್ಲ!

ನದಿ

Image
ನಿನ್ನೆವರೆಗೂ ಅವಳ ಪುಟ್ಟ ಕೈಗಳಲ್ಲಿ ಸಿಕ್ಕು ಪುಟ್ಟ ಪಾದಗಳಿಗೆ ಮುತ್ತಿಕ್ಕಿ ಕಿಲಕಿಲ ನಗುವಿಗೆ ಸಾಥಿಯಾಗಿದ್ದು, ಇಂದು ಊದಿಕೊಂಡ ಅವಳ ಶವವನ್ನು ಹೊತ್ತು ದಡದಲ್ಲಿ, ಮಳೆಯಂತೆ ಕಣ್ಣೀರು ಸುರಿಸುವ ಅಮ್ಮನನ್ನೂ ಲೆಕ್ಕಿಸದೆ ಹರಿಯುತ್ತಿದೆ ನದಿ... ಇವಳು ನಾವಂದು ಕೊಂಡಂತೆ ಇಲ್ಲ ಎಂದು ಜನರಾಡಿಕೊಳ್ತಾರೆ ಆಷಾಢದಲ್ಲಿ ರಭಸವಾಗಿ ಹರಿವ ಕೋಪಿಷ್ಠೆ ಮಕರ ಮಾಸದ ಮಂಜು ಮುಸುಕಿದ ಮುಂಜಾವಿನಲಿ ಹುಸಿಕೋಪ ತರಿಸುವ ಪ್ರೇಯಸಿ ಒಡಲೊಳಗೆ ಪ್ರೇಮದ ತಾಪ ಹೊರಗೆ ತಂಪಾದ ಮೈ ಮೆಲುನಗೆಯ ಮೋನಾಲಿಸಾಳಂತೆ ಚಿತ್ರ ವಿಚಿತ್ರ ಛಾಯೆ... ಚಂದಿರನ ಬೆಳಕಲ್ಲಿ ಹಾಲುಕ್ಕಿದಂತೆ ಹರಿವ ಮತ್ತೊಮ್ಮೆ ಬಿಳಿ ದಿರಿಸು ತೊಟ್ಟ ಯಕ್ಷಿಯಂತೆ ಭಯಾನಕ ರೂಪ ಮನದೊಳಗಿರುವ ದುಃಖಗಳನ್ನು ಬದಿಗೊತ್ತಿ ಏರಿಳಿದು ಹರಿವಳು ಮೈ ಮುರಿದು ಕೈ ಚಾಚಿ ನಡುವ ಬಳುಕಿಸಿ ಲಜ್ಜೆ ಹೆಜ್ಜೆಯನ್ನಿಟ್ಟು ಸನಿಹದಲ್ಲಿದ್ದರೂ ಅದು ನನ್ನದಲ್ಲ ಎಂಬಂತೆ ಅಳುವ ದಂಡೆಯ ಮೈಗೆ ಗುದ್ದಿ, ಮುದ್ದಿಸಿ ಯಾರಿಗೂ ಅರಿವಾಗದಂತೆ ನೋವ ನುಂಗಿ ಯಾರಲ್ಲೂ ಕೋಪಿಸದೆ ಕಾಮುಕ ಹೃದಯೀ ಸಮುದ್ರದ ಸೆಳೆತಕ್ಕೆ ಸೋತು ತನ್ನನ್ನೇ ಅರ್ಪಿಸಲು ಹೊರಟು ನಿಂತಾಗ ಅವಳಲ್ಲಿ ಪ್ರೇಮವಿತ್ತು, ಪ್ರೇಮಿಯ ಸೇರುವ ತವಕ ಸವತಿಯಾಗುವೆನೆಂಬ ನೋವೂ...

ನಡೆ ಪಾಡು

Image
ಹಸಿವಿನ ಸಂಪತ್ತು ಪ್ರೇಮದ ನೋವೂ ಅಸ್ತಮವಾದಾಗ ಕತ್ತಲೆಯಲ್ಲಿ ಬೆಂದ ನಾನು ಬಡತನದ ಮೂಟೆ ಹೊತ್ತು ಹೊರಟಿದ್ದೇನೆ ಏನೂ ಕೊಡಲಿಚ್ಛಿಸದವರೂ ಏನೂ ಬಯಸದವರೂ ತಮ್ಮ ಲೆಕ್ಕಪತ್ರದಲ್ಲಿ ನನ್ನ ಹಸಿವಿನ ಬಗ್ಗೆ ಬರೆದಿಟ್ಟಿಲ್ಲ ಕೂಡಿಸುವುದು, ಕಳೆಯುವುದು ಗುಣಾಕಾರ, ಭಾಗಾಕಾರದಲ್ಲಿ ವಿಕೃತವಾಗಿರುವ ಶರೀರಗಳು ನನ್ನನ್ನು ಹಾದು ಹೋದುವು ರಕ್ತಗಳಿಲ್ಲದ ಆ ದೇಹ ಸೊರಗಿತ್ತು ಆಶ್ಚರ್ಯ! ನಾನೂ ಅವರ ದಾರಿಯಲ್ಲೇ ಸಾಗುತ್ತಿದ್ದೇನೆ ನನಗೇ ಗೊತ್ತಿಲ್ಲದ ನನ್ನನ್ನು ಗೊತ್ತಿಲ್ಲದ ದಾರಿಯಲ್ಲಿ ಯಾರು ಯಾರೊಬ್ಬರಿಗೂ ಗೊತ್ತಿಲ್ಲವೆಂಬಂತೆ ಒಬ್ಬಂಟಿಯಾಗುತ್ತಾರೆ ನಾನು ಯಾರೆಂದು ಕೇಳಲು ಇನ್ಯಾರೂ ಇಲ್ಲದಿದ್ದರೂ ಎಲ್ಲರೂ ನಾನು ಯಾರೆಂದು ಗುರುತು ಹಿಡಿದಿದ್ದರು ಅಟ್ಟಹಾಸಗೈದು ಹಾದು ಹೋದ ಗಬ್ಬು ನಾತದ ಶುಷ್ಕ ಗಾಳಿ ನನ್ನನ್ನು ಗಾಯಗೊಳಿಸಿದರೂ ಸುರಿದ ರಕ್ತಕ್ಕೆ ಗಂಧವಿರಲಿಲ್ಲ ಸುಸ್ತಾದಾಗ ಮಲಗಲು ಜಾಗ ಹುಡುಕಿದರೂ ಹಲವಾರು ಬೆಳಕುಗಳ ನಡುವೆ ಕಪ್ಪು ಬೆಳಕಿಗೆ ಜಾಗವಿಲ್ಲದೇ ಹೋಯ್ತು ನೆರಳಿಗಾಗಿ ಬಯಸಿ ಓಡುವ ಮರಗಳ ಓಡುತ್ತಿರುವ ನೆರಳನ್ನು ಹಿಡಿಯಲಾಗದೆ ಸುಸ್ತು ಬಿದ್ದೆ ಈಗ ನಾನು ಭೂಮಿಗೂ ಬೇಡವಾದೆ ಅಸ್ತಿತ್ವವಿಲ್ಲದೆ ಅಲೆಯುತ್ತಾ ಭಾರವಾದ ದೇಹವನ್ನು ಹೊತ್ತು ಲಕ್ಷ್ಯಗಳಿಲ್ಲದೆ ನಿಂತೆ!.

ಪ್ರಣಯ ಕಾಲ

Image
ಕನ್ನಡಿಯ ಮುಂದೆ ನಿಂತು ಸಿಂಗರಿಸುವಾಗ ಅವನ ನೆನಪು ಕಾಡುತ್ತೆ ನನ್ನ ಬೆರಳುಗಳನ್ನು ಮೆಲ್ಲನೆ ಹಿಚುಕಿ ಕಾಲುಗಳ ಸೌಂದರ್ಯ ವರ್ಣಿಸುತ್ತಾ ಪಿಸುಗುಡುವಂತೆ ಕಿವಿ ಪಕ್ಕ ಬಂದು ಕೆನ್ನೆಗೆ ಮುತ್ತಿಟ್ಟ ಆ ಕ್ಷಣಗಳು... ಹುಡುಗ ಹುಡುಗಿಯೆಂಬ ಜೀವಶಾಸ್ತ್ರದ ಸಿದ್ಧಾಂತವೂ ಈಸ್ಟ್ರೋಜನ್ನೂ ಪ್ರೊಜೆಸ್ಟ್ರಾನ್‌ಗಳು ನನ್ನಲ್ಲಿ ಜಾಗೃತವಾದಾಗ ಆಂಡ್ರಾಜನ್‌ನ ಏರಿಳಿತ ಅವನಲ್ಲಿ... +ve -ve ಧ್ರುವಗಳು ಆಕರ್ಷಿಸುತ್ತವೆ ಎಂಬ ರಸಾಯನ ಶಾಸ್ತ್ರವೂ ಮೈನೆಸ್ ಮೈನೆಸ್ ಪ್ಲಸ್ ಆಗುವ ಗಣಿತವೂ ನಮ್ಮೊಡಲಲ್ಲಿ ಸಮೀಕರಣಗೊಂಡಾಗ XX, XY ಕ್ರೋಮೋಸೋಮ್‌ಗಳ ಬಯಾಲಜಿಯೂ, ಕೆಮೆಸ್ಟ್ರಿಯೂ ಸೇರಿ ಕೂಡಿ ಕಳೆದು ಗುಣಿಸಿ, ಭಾಗಿಸಿ ಸಿಕ್ಕ ಲೆಕ್ಕಚಾರದ ಕನಸುಗಳು ಹೃದಯವೆಂಬುದು ಬರೀ ಅಂಗವೆಂದುಕೊಂಡಿದ್ದನೇ ಅವನು? ಪ್ರಾಕ್ಟಿಕಲ್ ಮನುಷ್ಯ! ಪ್ರೀತಿ ಹುಟ್ಟುವುದು ಕಣ್ಣಿಂದ ಎಂದು ಅಂದುಕೊಂಡಿದ್ದ ಶತ ದಡ್ಡಿ ನಾನು ಕಣ್ಣು ಮುಚ್ಚಿ ಕುಳಿತರೆ ಮನುಷ್ಯ-ಮನುಷ್ಯನ ನಡುವಿನ ಅಂತರವನ್ನು ನೆನೆದು ನಗು ಬರುತ್ತದೆ... ಪ್ರೀತಿ ಹುಟ್ಟುವುದು ಕಣ್ಣಿನಿಂದಲೇ? ನಾನು ಕಣ್ಣು ಮುಚ್ಚಿದ್ದೇನೆ...

ಮರಣ

Image
ಕನಸು ಗಳನ್ನು ಹೆಣೆದು ಕಾಲವನ್ನು ಹಿಂದಿಕ್ಕಿ ವರ್ತಮಾನದ ಗಾಲಿಯಲ್ಲಿ ಸುತ್ತುತ್ತಾ ಮುಂದೆ ಸಾಗುವ ಹೊತ್ತು ಕತ್ತಲೆ ಜೀವನದ ಹೊದಿಕೆಯಂತೆ ನಮ್ಮ ಅನುಮತಿಗೆ ಕಾಯದೆ ಬಂದು ಮುಂದೆ ನಿಲ್ಲುವಾಗ ಹೃದಯ ನನ್ನಲ್ಲಿ ಮುನಿಸಿಕೊಂಡಿದೆ ಎನ್ನುವ ಹಾಗೆ ಬಡಿತ ನಿಲ್ಲಿಸಿದಾಗ ಕಣ್ಣುಗಳು ಬಣ್ಣಗಳನ್ನು ಧಿಕ್ಕರಿಸಿ ಕತ್ತಲೆಯನ್ನೇ ಬಯಸಿದಾಗ ದೇಹ ಮಣ್ಣನ್ನಪ್ಪಿ ಪವಡಿಸುವಾಗ ಒಬ್ಬಂಟಿ ಪ್ರಶಾಂತ ಗಳಿಗೆ... ಯಾವುದೇ ಭಾವನೆಗಳಿಲ್ಲದೆ ಶೂನ್ಯ ಬಿಂದುವಿನಲ್ಲಿ ನಾನು ನಾನು ಮಾತ್ರವಾಗುತ್ತೇನೆ

ಬದುಕಿನ ಕಹಿ ಸತ್ಯಗಳು

ಮನಸ್ಸಲ್ಲಿ ಎಂದೋ ಅದುಮಿಟ್ಟ ಭಾವನೆಗಳು ಸ್ವಯಂ ವಿಧಿಯ ಬರಹದಲ್ಲಿನ ಅಕ್ಷರಗಳಾಗಿ ಹುಣ್ಣಿಮೆಗೊಮ್ಮೆ ಚಿಮ್ಮುವ ಕಡಲಿನ ಅಲೆಗಳಿಗೆ ಸಿಕ್ಕಿ, ಮಾಸಿ ಹೋದಾಗ ಸ್ವರ್ಗಸ್ಥ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದ ಕೂಳಿಗಾಗಿ ಕಾದಾಡುವ ಕಾಗೆಗಳ ಸ್ವಾರ್ಥತೆ ಅಣಕಿಸುತ್ತಿತ್ತು... ಮುಂದೆ ಬಯಲ ದಾರಿಯಲಿ ಸಾಗಿದರೆ ಕಿತ್ತೋಗಿರುವ ಚಪ್ಪಲಿ ದುಸ್ಥಿತಿಯಲ್ಲಿರುವ ಬದುಕನ್ನು ಪರಿಹಾಸ್ಯ ಮಾಡುತ್ತಾ ದಾರಿ ಮಧ್ಯೆಯಿರುವ ಗಾಂಧಿ ಪ್ರತಿಮೆಯನ್ನು ಆಲಂಗಿಸಿ ಬಿಕ್ಕಳಿಸಿದೆ ಜೀವನದ ಪುಸ್ತಕದ ಒಣಗಿದ ಹಾಳೆಗಳಲ್ಲಿ ಅಂಧಕಾರ ವ್ಯಾಪಿಸಿದಾಗ ಅಳುವುದನ್ನು ಮಾತ್ರ ಕಲಿಸಿದ ಜೀವ 'ಮರುಭೂಮಿಯ ಹೂ' ವನ್ನು ನೋಡಿ ಸಂತಾಪ ಸೂಚಿಸಿ ಇನ್ನರಳಲಿರುವ ಮೊಗ್ಗುಗಳಿಗೆ ಶುಭಾಶಯ ಕೋರಿ ಮುಂದೆ ಸಾಗಿದೆ ತಿರುಗುವ ಕಾಲ ಚಕ್ರವು ದೂರವನ್ನು ಕ್ರಮಿಸುತ್ತಾ ನೆನಪುಗಳನ್ನು ಗಾಳಿಯಲ್ಲಿ ತೇಲಿಸಿ ಹಾರಿ ಹೋಗುವುದು ಗೆದ್ದಲು ಹಿಡಿದ ನೆನಪುಗಳು ಫಂಗಸ್ ಹಿಡಿದ ಕನಸುಗಳು ಗೋರಿಯೊಳಗೆ ನಿದ್ರಿಸುತ್ತಿರೆ ಗಿಳಿಗಳು, ಹೂಗಳೂ ನವ ವಸಂತಕ್ಕಾಗಿ ಕಾದು ಕುಳಿತಿವೆ. (ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಿತ)